ಬೆಂಗಳೂರು, ಅ.19- ಜಿಟಿ ಜಿಟಿ ಹಗಲು ಮಳೆಗೆ ನಿನ್ನೆ ಬಿಡುವು ಕೊಟ್ಟಿದ್ದ ವರುಣ ಇಂದು ಮತ್ತೆ ಸುರಿಯುತ್ತಿದ್ದು, ಸಿಲಿಕಾನ್ ಸಿಟಿಯ ಜನರು ಮತ್ತೆ ಸಮಸ್ಯೆ ಎದುರಿಸುವಂತಾಗಿತ್ತು.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬುಧವಾರ ಮತ್ತು ಗುರುವಾರ ನಗರದಲ್ಲಿ ಭಾರೀ ಮಳೆಯಾಗಿ ಅಕ್ಷರಶಃ ಜನ ಜೀವನ ಅಸ್ತವಸ್ಯಸ್ತಗೊಂಡಿತ್ತು.
ನಿನ್ನೆ ಬೆಳಗ್ಗೆ ಮಳೆ ಬಿಡುವು ಕೊಟ್ಟು ರಾತ್ರಿ ನಗರದ ವಿವಿಧೆಡೆ ಸುರಿದಿತ್ತು. ಇಂದು ಬೆಳಗ್ಗೆ 10 ಗಂಟೆವೆರೆಗೂ ಸುಮನಿದ್ದು ನಂತರ ಪ್ರಾರಂಭವಾದ ಮಳೆ ಜೋರಾಗಿ ಸುರಿದರೆ, ಒಂದು ಬಾರಿ ಸೋನೆ ಮಳೆಯಾಗಿ ಸುರಿಯುತ್ತಿತ್ತು. ಶಾಲಾ-ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿಗಳಿಗೆ, ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬಂದ ಜನರಿಗೆ ಮತ್ತು ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಿತ್ತು.
ರಾತ್ರಿ ವೇಳೆ ಎಷ್ಟೇ ಮಳೆ ಸುರಿದರೂ ಪರವಾಗಿಲ್ಲ. ಆದರೆ ಬೆಳಗ್ಗೆ ಮಳೆ ಸುರಿದರೆ ಎಲ್ಲ ಕೆಲಸಗಳಿಗೂ ತೊಂದರೆಯಾಗುತ್ತದೆ. ವ್ಯಾಪಾರ, ಸಂಚಾರ ಸೇರಿದಂತೆ ಇತರೆ ಕೆಲಸಗಳಿಗೆ ಸಮಸ್ಯೆ ಎದುರಾಗಿತ್ತು.
ಸಂಚಾರ ದಟ್ಟಣೆ: ಮಳೆ ಬಂದ ಕೂಡಲೇ ದ್ವಿಚಕ್ರವಾಹನ ಸವಾರರು ಫ್ಲೈ ಓವರ್ ಕೆಳಭಾಗ, ಅಂಗಡಿ-ಮುಂಗಟ್ಟು, ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದ ದೃಶ್ಯಕಂಡುಬಂದವು. ಇನ್ನೂ ಕೆಲವರು ಮಳೆಯಲ್ಲೆ ತೊಯ್ದುಕೊಂಡು ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರೆ, ಕೆಲವು ಸವಾರರು ಜರ್ಕಿನ್ ಧರಿಸಿ ಸಾಗಿದರು.
ಇದರಿಂದ ಹೆಚ್ಚು ಸಂಚಾರ ದಟ್ಟಣೆ ಇರುವ ಮೆಜೆಸ್ಟಿಕ್, ಯಶವಂತಪುರ, ಮೈಸೂರು ರಸ್ತೆ, ವಿಜಯನಗರ, ಜಯನಗರ, ಮಲ್ಲೀಶ್ವರಂ, ಸೇರಿದಂತೆ ಮತ್ತಿತರ ಕಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಗಿತ್ತು.
ವೀಕೆಂಡ್ ಟ್ರಿಪ್‌ಗೆ ಕಟ್: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಶೀತಗಾಳಿ ಬೀಸುತ್ತಿದ್ದು, ಟ್ರಿಪ್ ಪ್ಲಾನ್‌ನಲ್ಲಿದ್ದ ನಗರದ ಜನತೆಗೆ ಮಳೆರಾಯ ತಣ್ಣೀರು ಎರಚಿದ್ದಾನೆ. ಇನ್ನು ಇಂದು ಕೆಲವರಿಗೆ ರಜೆ ಇದ್ದು, ಹೊರಗಡೆ ಸುತ್ತಾಡಲು ತೆರಳುತ್ತಿದ್ದವರಿಗೂ ತೊಂದರೆ ಯಾಗಿದ್ದು, ಮನೆಯಿಂದ ಹೊರಬಾದರೆ ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು.
ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ:
ಮಳೆಯಿಂದ ನಗರದ ಬೀದಿ ಬದಿ ತರಕಾರಿ, ಹಣ್ಣು ಹಂಪಲು ಸೇರಿದಂತೆ ಇತರೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ನಿರಂತರ ಮಳೆಯಿಂದ ಅಂಗಡಿ ಬಂದ್ ಮಾಡಿಕೊಂಡು ಮನೆ ಸೇರಿದ್ದರೆ, ಮತ್ತೆ ಕೆಲವರು ಟಾರ್ಪಲ್ ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ನಗರದಲ್ಲಿ ಕಂಡು ಬಂದವು. ಒಟ್ಟಾರೆ ಮಳೆರಾಯ ವೀಕೆಂಡ್ ಮಸ್ತಿಗೆ ಬ್ರೇಕ್ ಹಾಕಿದ್ದಾನೆ.