Saturday, October 19, 2024
Homeಬೆಂಗಳೂರುಶಿಕ್ಷಕರ ನೇಮಕಾತಿ ಆಂಕಾಕ್ಷಿಗಳಿಂದ ಡಿಸಿಎಂ ಕಾರಿಗೆ ಮುತ್ತಿಗೆ ಯತ್ನ

ಶಿಕ್ಷಕರ ನೇಮಕಾತಿ ಆಂಕಾಕ್ಷಿಗಳಿಂದ ಡಿಸಿಎಂ ಕಾರಿಗೆ ಮುತ್ತಿಗೆ ಯತ್ನ

Attempt to besiege DCM's car by teachers' recruitment

ಬೆಂಗಳೂರು,ಅ.19- ಶಿಕ್ಷಕರ ಹುದ್ದೆಯ ನೇಮಕಾತಿ ಆಕಾಂಕ್ಷಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕಾರಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು ಇಂದು ಮುಂಜಾನೆ 6 ಗಂಟೆಯಿಂದಲೇ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್‌ ಅವರ ಮನೆಯ ಎದುರು ಜಮಾಯಿಸಿದ್ದರು.


ತಮ ಅಳಲನ್ನು ಹೇಳಿಕೊಳ್ಳಲು ಪ್ರಯತ್ನಿಸಿದ್ದ ಅವರಿಗೆ ಡಿ.ಕೆ.ಶಿವಕುಮಾರ್‌ ಸಮಯ ನೀಡದೇ ಬಿಗಿ ಭದ್ರತೆಯೊಂದಿಗೆ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಗೆ ತೆರಳಿದರು ಎಂದು ದೂರಲಾಗಿದೆ. ಇದರಿಂದ ಸಿಟ್ಟಾದ ಅಭ್ಯರ್ಥಿಗಳು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ನಾವು ಬೆಳಿಗ್ಗೆಯಿಂದಲೂ ಕಾದು ಕುಳಿತಿದ್ದೇವೆ. ಒಂದು ನಿಮಿಷ ಸಮಯ ಕೊಟ್ಟು ನಮ ಕಷ್ಟ ಕೇಳಲು ಉಪಮುಖ್ಯಮಂತ್ರಿಯವರಿಗೆ ಆಗಲಿಲ್ಲವೇ ಎಂದು ಕಿಡಿಕಾರಿದರು. ಚುನಾವಣೆಯ ಸಂದರ್ಭದಲ್ಲಿ ನಮ ಮನೆಯ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ. ಅಧಿಕಾರ ಸಿಕ್ಕ ಬಳಿಕ ನಾವು ಅವರ ಮನೆಬಾಗಿಲು ಕಾದರೂ ಕ್ಯಾರೇ ಎನ್ನುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈದ್ರಾಬಾದ್‌- ಕರ್ನಾಟಕ ಭಾಗ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕೇವಲ 78 ಹುದ್ದೆಗಳಿಗೆ ಮಾತ್ರ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ದೈಹಿಕ ಶಿಕ್ಷಕರ 216 ಹುದ್ದೆಗಳಿಗೆ ಅಧಿಸೂಚನೆ ಜಾರಿಯಾಗಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಪ್ರದೇಶಗಳಲ್ಲಿ ಒಂದು ಶಾಲೆಗೆ ಒಬ್ಬ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂದು ಆರೋಪಿಸಿದರು. 20 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳಿಗೆ ಏಕಕಾಲಕ್ಕೆ ನೇಮಕಾತಿ ಮಾಡಿದರೆ ಮಾತ್ರ ಕೊಂಚ ಮಟ್ಟಿನ ಪರಿಹಾರ ನೀಡಲು ಸಾಧ್ಯ. ಈಗ ಕರೆದಿರುವ ಅಧಿಸೂಚನೆಯಲ್ಲಿ ವಿಷಯವಾರು, ಜಿಲ್ಲಾವಾರು ಪ್ರಾಧಾನ್ಯತೆ ಇಲ್ಲ. ಕಾಟಾಚಾರಕ್ಕೆ ನೇಮಕಾತಿ ಮಾಡಲಾಗುತ್ತಿದೆ ಜನಪ್ರತಿನಿಧಿಗಳು ನಮ ಕಷ್ಟ ಕೇಳುತ್ತಿಲ್ಲ ಎಂದು
ದೂರಿದರು.

ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಬೇಕು ಅಥವಾ ಖಾಯಂ ಹುದ್ದೆಗಳ ನೇಮಕಾತಿಯನ್ನು ಹೆಚ್ಚಿಸಬೇಕು. ಆವರೆಗೂ ನಮ ಹೋರಾಟ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪೊಲೀಸರು ಅಭ್ಯರ್ಥಿಗಳನ್ನು ಮನವೊಲಿಸಿ ಅಲ್ಲಿಂದ ತೆರವುಗೊಳಿಸಲು ಹರಸಾಹಸ ಪಟ್ಟರು

RELATED ARTICLES

Latest News