Sunday, October 20, 2024
Homeಬೆಂಗಳೂರುಬೆಂಗಳೂರು : ಮಾರಸಂದ್ರದ ಬಳಿ 40 ಕೋಟಿ ರೂ. ಮೌಲ್ಯದ ಒತ್ತುವರಿ ಭೂಮಿ ತೆರವು

ಬೆಂಗಳೂರು : ಮಾರಸಂದ್ರದ ಬಳಿ 40 ಕೋಟಿ ರೂ. ಮೌಲ್ಯದ ಒತ್ತುವರಿ ಭೂಮಿ ತೆರವು

40 crores worth land recoverd near marasandra bengaluru

ಬೆಂಗಳೂರು, ಅ.20- ರಾಜ್ಯ ರಾಜಧಾನಿಯಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು ಮತ್ತೆರೆಡು ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಪಡೆಯಲಾಗಿದೆ.ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಆದೇಶದ ಹಿನ್ನೆಲೆಯಲ್ಲಿ ಯಲಹಂಕ ಬಳಿಯ ಮಾರಸಂದ್ರದ ಗಸ್ತು ಸರ್ವೆ ನಂ.182ರಲ್ಲಿ ಒತ್ತುವರಿ ಮಾಡಲಾಗಿದ್ದ 2 ಎಕರೆ 10 ಗುಂಟೆ ಅರಣ್ಯ ಜಮೀನನ್ನು ತೆರವು ಮಾಡಿ, ಅಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಭೈರಾರೆಡ್ಡಿ ಎಂಬುವವರು ಮಾರಸಂದ್ರದ ಮೀಸಲು ಅರಣ್ಯ ಸರ್ವೆ ನಂ182ರಲ್ಲಿ ಅರಣ್ಯ ಇಲಾಖೆಗೆ ಸೇರಿದ 2.10 ಎಕರೆ ಜಮೀನು ಒತ್ತುವರಿ ಮಾಡಿದ್ದರು. ಈ ಸಂಬಂಧ ಎಫ್‌.ಐ.ಆರ್‌. ದಾಖಲಿಸಿಕೊಂಡಿದ್ದ ಬೆಂಗಳೂರು ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಜೆಸಿಬಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 40 ಕೋಟಿ ರೂ.ಗೂ ಅಧಿಕ ಎಂದು ಹೇಳಲಾಗಿದೆ.

ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು:
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ರಾಜಧಾನಿಯಲ್ಲಿ ಒತ್ತುವರಿ ಮಾಡಿರುವ ಅರಣ್ಯ ಭೂಮಿಯ ಒತ್ತುವರಿಗೆ ಕ್ರಮ ವಹಿಸುವಂತೆ ಅರಣ್ಯ ಸಚಿವರು ಸ್ಪಷ್ಟ ಸೂಚನೆ ನೀಡಿದ್ದು, ಅಧಿಕಾರಿಗಳು ಈವರೆಗೆ 103 ಎಕರೆಗೂ ಹೆಚ್ಚು ಒತ್ತುವರಿ ತೆರವುಗೊಳಿಸಿದ್ದಾರೆ.

ಕಗ್ಗಲಿಪುರ ವಲಯದ ಬಿಎಂ ಕಾವಲಿನಲ್ಲಿ 27.2 ಎಕರೆ, ತುರಹಳ್ಳಿ ಅರಣ್ಯ ವ್ಯಾಪ್ತಿಯ ಮೈಲಸಂದ್ರ, ಬಿ.ಎಂ. ಕಾವಲ್‌ ಮತ್ತು ಕೆಂಚೇನಹಳ್ಳಿಯಲ್ಲಿ 16.9 ಎಕರೆ, ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದ ಸೂಲಿಕೆರೆಯಲ್ಲಿ 2.5 ಎಕರೆ, ಯು.ಎಂ. ಕಾವಲ್‌ ನಲ್ಲಿ 1 ಎಕರೆ, ಆನೆಕಲ್‌ ವಲಯದ ಭೂತನಹಳ್ಳಿ, ರಾಗಿಹಳ್ಳಿಯಲ್ಲಿ 14.4 ಎಕರೆ, ಬೆಂಗಳೂರು, ಜಾರಕಬಂಡೆ ಕಾವಲು, ಪೀಣ್ಯದಲ್ಲಿ 18 ಎಕರೆ, ಯಲಹಂಕ ವಲಯದ ಕೊತ್ತನೂರಿನಲ್ಲಿ 17.3 ಎಕರೆ, ಮಾರಸಂದ್ರದಲ್ಲಿ 2.10 ಎಕರೆ, ಇತರೆ 3 ಎಕರೆ 6 ಗುಂಟೆ ಒತ್ತುವರಿ ತೆರವು ಮಾಡಲಾಗಿದೆ.

ತೆರವು ಮಾಡಲಾಗಿರುವ ಭೂಮಿಯ ಒಟ್ಟು ಮೌಲ್ಯ 3000 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ. ಇದಲ್ಲದೆ ಕೊತ್ತನೂರಿನಲ್ಲಿ ಇನ್ನೂ48ರಲ್ಲಿ ಸುಮಾರು 700 ಕೋಟಿ ರೂ. ಬೆಲೆ ಬಾಳುವ 22 ಎಕರೆ 08 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಇದನ್ನು ತೆರವು ಮಾಡಲು ಕಾನೂನು ಕ್ರಮಕ್ಕ ಮುಂದಾಗುವಂತೆ ಕೂಡ ಈಶ್ವರ ಖಂಡ್ರೆ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

RELATED ARTICLES

Latest News