ಮಂಗಳೂರು,ಅ.20– ನಗರದ ಹೊರವಲಯದ ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ದುಷ್ಕರ್ಮಿಗಳು ಜಲ್ಲಿ ಕಲ್ಲುಗಳನ್ನು ಸುರಿದು ದುಷ್ಕೃತ್ಯಕ್ಕೆ ಮುಂದಾಗಿರುವ ಘಟನೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ರೈಲು ಹಳಿ ತಪ್ಪಿಸುವ ಯತ್ನಗಳು ಹೆಚ್ಚಾಗುತ್ತಿದ್ದು,ಇದೀಗ ಮಂಗಳೂರಿನಲ್ಲಿ ಇದೇ ಮಾದರಿಯ ಘಟನೆಯೊಂದು ತಡರಾತ್ರಿ ತೊಕ್ಕೊಟ್ಟುವಿನ ಬಳಿ ನಡೆದಿದೆ.
ರಾತ್ರಿ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಮಾರ್ಗದಲ್ಲಿ ಉಳ್ಳಾಲದ ಬಳಿ ರೈಲ್ವೆ ಹಳಿ ಮೇಲೆ ಜಲ್ಲಿ ಕಲ್ಲುಗಳನ್ನು ಸುರಿದಿದ್ದರು,ರೈಲುಗಳು ಚಲಿಸುವ ಸಂದರ್ಭದಲ್ಲಿ ದೊಡ್ಡ ಸದ್ದು ಕೇಳಿ ಪ್ರಯಾಣಿಕರಿಗೆ ಆತಂಕ ಉಂಟಾಗಿತ್ತು. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಕೆಲವು ಮಂದಿ ಭೂಕಂಪವಾಗಿರಬಹುದು ಎಂದುಕೊಂಡಿದ್ದರು.
ಬಳಿಕ ರೈಲ್ವೆ ಹಳಿ ಕಡೆಯಿಂದ ಶಬ್ದ ಕೇಳಿದ್ದರಿಂದ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಕೆಲ ನಿವಾಸಿಗಳು ಪರಿಶೀಲನೆ ನಡೆಸಿದ್ದಾರೆ. ಆಗ ಹಳಿ ಮೇಲೆ ಜಲ್ಲಿಕಲ್ಲುಗಳನ್ನು ಸುರಿದಿರುವುದು ಕಂಡುಬಂದಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಂತರ ಸ್ಥಳೀಯ ಗಣೇಶ ಮಂದಿರ ಪ್ರದೇಶಕ್ಕೆ ತೆರಳಿದ ರೈಲ್ವೆ ಅಧಿಕಾರಿಗಳೂ ಹಾಗೂ ಸಿಬ್ಬಂದಿಗಳು, ರೈಲ್ವೆ ಹಳಿ ಬಳಿ ಮುನ್ನೆಚ್ಚರಿಕೆ ವಹಿಸುವಂತೆ ಮತ್ತು ಹಳಿ ಮೇಲೆ ಹಾಗೂ ಅಕ್ಕ ಪಕ್ಕ ವಸ್ತುಗಳನ್ನು ಇಡಬಾರದು. ಇಂತಹ ದೃಶ್ಯಗಳು ಕಂಡು ಬಂದರೆ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಕೆಲವೆಡೆ ರೈಲನ್ನು ಹಳಿ ತಪ್ಪಿಸಿ ಮತ್ತು ಸ್ಪೋಟಿಸಲು ಸಂಘಟನೆಗಳು ಸಂಚು ರೂಪಿಸಿ ವಿಫಲ ಯತ್ನಗಳನ್ನು ನಡೆಸುತ್ತಿದ್ದು, ಪ್ರಸ್ತುತ ಇದು ಈಗ ಕರ್ನಾಟಕ ವ್ಯಾಪ್ತಿಗೂ ವ್ಯಾಪಿಸಿದೆ. ಪ್ರಕರಣದ ಕುರಿತಂತೆ ಉನ್ನತ ಮಟ್ಟದ ತನಿಖೆ ಕೂಡ ನಡೆಸಲಾಗುತ್ತಿದ್ದು, ಇದೊಂದು ಕುಚೋದ್ಯದ ಘಟನೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.