ಬೆಂಗಳೂರು, ಅ. 21- ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅಕ್ಟೋಬರ್ 31ರ ಒಳಗೆ ಫ್ರಾಂಚೈಸಿಗಳು ಅಂತಿಮ ಪಟ್ಟಿ ಸಲ್ಲಿಸಬೇಕೆಂದು ಡೈಡ್‌ಲೈನ್ ನೀಡಿರುವ ಬೆನ್ನಲ್ಲೇ ಸನ್‌ರೈಸರ್ಸ್ ಹೈದ್ರಾಬಾದ್‌ನ ಯುವ ಆಟಗಾರ ಅಬ್ದುಲ್ ಸಮದ್ ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.
ರಣಜಿ ಟೂರ್ನಿ ಇತಿಹಾಸದಲ್ಲೇ ಒಂದೇ ಪಂದ್ಯದ ಎರಡೂ ಇನಿಂಗ್ಸ್ ನಲ್ಲೂ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಅಬ್ದುಲ್ ಸಮದ್ ಪಾತ್ರರಾಗಿದ್ದಾರೆ. ಕಟಕ್‌ನ ಬರ್ಬತಿ ಸ್ಟೇಡಿಯಂನಲ್ಲಿ ಒಡಿಶಾ ವಿರುದ್ಧ ನಡೆಯುತ್ತಿರುವ ಮೊದಲ ಇನಿಂಗ್ಸ್ ನಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 117 ಎಸೆತಗಳಲ್ಲಿ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದರೆ, ದ್ವಿತೀಯ ಇನಿಂಗ್ಸ್ ನಲ್ಲೂ ಒಡಿಶಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸಮದ್ 108 ಎಸೆತಗಳನ್ನು ಎದುರಿಸಿ 5 ಮನಮೋಹಕ ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಗಳಿಸುವ ಮೂಲಕ ಜಮು ಕಾಶ್ಮೀರ ದ್ವಿತೀಯ ಇನಿಂಗ್ಸ್ ನಲ್ಲಿ 270/7 ಡಿಕ್ಲೇರ್ಡ್ ಘೋಷಿಸಿದೆ. ಪಂದ್ಯದ ಅಂತಿಮ ದಿನವಾದ ಇಂದು ಒಡಿಶಾ ಗೆಲ್ಲಲು 268 ರನ್‌ಗಳ ಗುರಿ ಪಡೆದಿದೆ.
10 ಓವರ್‌ಗಳ ಅಂತ್ಯಕ್ಕೆ ಒಡಿಶಾ 14 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 2023-24ರ ರಣಜಿ ಟೂರ್ನಿಯಲ್ಲಿ 7 ಪಂದ್ಯಗಳಿಂದ ತಲಾ ಅರ್ಧಶತಕ ಹಾಗೂ ಶತಕಗಳ ನೆರವಿನಿಂದ ಸಮದ್ 276 ರನ್ ಗಳಿಸಿದ್ದರು.
ಐಪಿಎಲ್‌ನಲ್ಲಿ ಮಿಂಚು:
2020ರಲ್ಲಿ ಮೂಲ ಬೆಲೆ 4 ಕೋಟಿಗೆ ಸನ್‌ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಬಿಕರಿಯಾಗಿದ್ದ ಸಮದ್ 50 ಪಂದ್ಯಗಳಿಂದ 577 ರನ್ ಗಳಿಸಿದ್ದರೆ, 2024ರ ಸೀಸನ್‌ನಲ್ಲಿ 16 ಪಂದ್ಯಗಳಿಂದ 182 ರನ್ ಬಾರಿಸಿದ್ದಾರೆ.