Thursday, April 16, 2026
Homeಜಿಲ್ಲಾ ಸುದ್ದಿಗಳುಹಾಸನ : ಕಿಲ್ಲರ್‌ ಒಂಟಿಸಲಗ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ

ಹಾಸನ : ಕಿಲ್ಲರ್‌ ಒಂಟಿಸಲಗ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ

Hassan: Forest Department launches operation to capture killer elephant

ಹಾಸನ,ಜ.16- ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿಯ ಮೂಗಲಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ನಡೆದ ದುರ್ಘಟನೆಗೆ ಕಾರಣವಾದ ಕಿಲ್ಲರ್‌ ಒಂಟಿಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

ಕಾರ್ಮಿಕ ಮಹಿಳೆ ಶೋಭಾ ಮೇಲೆ ದಾಳಿ ನಡೆಸಿ ಪ್ರಾಣಹರಣ ಮಾಡಿದ ಕಾಡಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕ ಆಕ್ರೋಶದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಘಟನೆ ನಡೆದ ಬಳಿಕ ಸ್ಥಳೀಯರಲ್ಲಿ ಭೀತಿ ಹಾಗೂ ಆಕ್ರೋಶ ಹೆಚ್ಚಾಗಿದ್ದು, ಗ್ರಾಮಸ್ಥರು ಕಾಡಾನೆ ದಾಳಿ ತಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಿಲ್ಲರ್‌ ಕಾಡಾನೆ ಸೆರೆ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಿದೆ.
ಈ ಕಾರ್ಯಾಚರಣೆಗೆ ಮೈಸೂರು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ಐದು ತರಬೇತಿ ಪಡೆದ ಸಾಕಾನೆಗಳನ್ನು ಬೈರಾಪುರಕ್ಕೆ ಕರೆತರಲಾಗಿದೆ. ಸುಗ್ರೀವ, ಧನಂಜಯ, ಲಕ್ಷ್ಮಣ, ಅಯ್ಯಪ್ಪ ಹಾಗೂ ಹರ್ಷ ಎಂಬ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ.

ಪ್ರಸ್ತುತ ಕಿಲ್ಲರ್‌ ಒಂಟಿಸಲಗ ಬಿಕ್ಕೋಡು ಭಾಗದಲ್ಲಿ ಸಂಚರಿಸುತ್ತಿರುವ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಇಟಿಎಫ್‌ ತಂಡಗಳು ಕಾಡಾನೆ ಚಲನವಲನವನ್ನು ನಿಖರವಾಗಿ ಟ್ರ್ಯಾಕ್‌ ಮಾಡುತ್ತಿವೆ. ಡ್ರೋನ್‌ಗಳು, ಟ್ರ್ಯಾಕಿಂಗ್‌ ಸಾಧನಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಕಾರ್ಯಾಚರಣೆ ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಿಲ್ಲರ್‌ ಕಾಡಾನೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಗುರಿಯೊಂದಿಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಯಶಸ್ವಿಯಾದರೆ, ಕಳೆದ ಕೆಲವು ದಿನಗಳಿಂದ ಭಯದ ವಾತಾವರಣದಲ್ಲಿ ಬದುಕುತ್ತಿರುವ ಮೂಗಲಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ನಿಟ್ಟುಸಿರು ಬಿಡುವಂತಾಗಲಿದೆ.

RELATED ARTICLES

Latest News