ಬೆಂಗಳೂರು, ಅ.21- ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಅಡುಗೆ ಭಟ್ಟ ಗಾಯಗೊಂಡಿದ್ದು, ಮನೆ ಗೋಡೆ ಬಿದ್ದು ಹಾನಿಯಾಗಿರುವ ಘಟನೆ ಇಂದು ಬೆಳಗ್ಗೆ ಸುದ್ದಗೊಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಟಿಎಂ ಲೇಔಟ್ ಒಂದನೇ ಹಂತ ಮಂಜುನಾಥ ಲೇಔಟ್‌ನಲ್ಲಿ ಜಾನಕಿ ಎಂಬುವರ ಕಟ್ಟಡದಲ್ಲಿ ಉತ್ತರ ಪ್ರದೇಶ ಮೂಲದ ಪವನ್ ಎಂಬಾತ ಬಾಡಿಗೆಗೆ ವಾಸವಿದ್ದಾನೆ. ವೃತ್ತಿಯಲ್ಲಿ ಅಡುಗೆ ಭಟ್ಟರು. ಪವನ್ ವಾಸವಿದ್ದ ಸಣ್ಣ ರೂಮ್‌ನಲ್ಲಿ ಅಡಿಗೆ ಮಾಡಲು ಸಿಲಿಂಡರ್ ಇಟ್ಟಿಕೊಂಡಿದ್ದು, ರಾತ್ರಿ ಸಿಲಿಂಡರ್ ಖಾಲಿಯಾದ ಕಾರಣ ಹೊಸ ಸಿಲಿಂಡರ್ ಅಳವಡಿಸಿ ಮಲಗಿದ್ದಾನೆ.
ಆ ವೇಳೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದು ಪವನ್ ಗಮನಕ್ಕೆ ಬಂದಿಲ್ಲ. ಇಂದು ಬೆಳಗ್ಗೆ 8.30ರ ಸಮಯದಲ್ಲಿ ಹಾಲು ಕಾಯಿಸಲು ಗ್ಯಾಸ್ ಸ್ಟೌವ್ ಹಚ್ಚುತ್ತಿದ್ದಂತೆ ಸ್ಫೋಟಗೊಂಡಿದೆ. ಪರಿಣಾಮ ಪವನ್‌ಗೆ ಸುಟ್ಟ ಗಾಯವಾಗಿದ್ದು, ಗೋಡೆ ಕುಸಿದು ಬಿದ್ದಿದೆ. ಕೊಠಡಿಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ.
ಸ್ಫೋಟದ ಶಬ್ದ ಕೇಳಿ ನೆರೆಹೊರೆಯವರು ಮನೆಯಿಂದ ಹೊರಗೆ ಬಂದಿದ್ದಾರೆ. ಸ್ಥಳೀಯರು ತಕ್ಷಣ ಪವನ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸುದ್ದಿ ತಿಳಿದು ಎಸ್‌ಜಿ ಪಾಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.