ಬೆಂಗಳೂರು,ಅ.22- ರಾಜ್ಯದ ಮಳೆ ಅನಾಹುತಗಳು ತೀವ್ರಗೊಂಡಿದ್ದು ಅದನ್ನು ಸರಿಪಡಿಸಲಿ ಕಳೆದೆರಡು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತೀವ್ರ ಮಳೆ ಅನಾಹುತಗಳ ಸಂದರ್ಭದಲ್ಲಿ ನಾನೇನು ಕಾಣೆಯಾಗಿಲ್ಲ. ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಕೆಲಸ ಮಾಡುಸುತ್ತಿದ್ದೇನೆ. ಸ್ಥಳಕ್ಕೆ ಭೇಟಿ ನೀಡಿ ಕೆಲಸ ಮಾಡಿಸುವುದು ದೊಡ್ಡ ವಿಚಾರವಲ್ಲ. ಅದು ಸುದ್ದಿಯಷ್ಟೇ ಆಗಲಿದೆ ಅಷ್ಟೇ ಎಂದರು.
ಮಳೆನೀರಿನ ಸಮಸ್ಯೆಗೆ ನಿನ್ನೆ ರಾತ್ರಿ ನಾನು ಸಿಲುಕಿ ತೊಂದರೆ ಅನುಭವಿಸಿದ್ದೇನೆ. ನೆಲಮಂಗಲ ಫ್ಲೈ ಓವರ್ ಮೇಲೆ ರಸ್ತೆಯಲ್ಲಿ ಸುಮಾರು 2 ಅಡಿ ನೀರಿತ್ತು. ಅಂತಹ ಪರಿಸ್ಥಿತಿಯಲ್ಲಿ ನಾನು ಸಿಲುಕಿದ್ದೆನು. ಅದರ ಕಷ್ಟ ಗೊತ್ತಿದೆ ಎಂದರು. ಕೆಲವು ಅಪಾರ್ಟ್ಮೆಂಟ್ಗಳನ್ನು 8 ದಿನಗಳ ಕಾಲ ಮುಚ್ಚಿಸಲು ಸೂಚಿಸಲಾಗಿದೆ. 5 ಎಸ್ಡಿಆರ್ಎಫ್ ತಂಡಗಳು ಮತ್ತು ಎನ್ಡಿಆರ್ಎಫ್ ತಂಡಗಳು ಕೆಲಸ ಮಾಡುತ್ತಿವೆ. 604 ಕಾಲುವೆಗಳನ್ನು ಸುಗಮಗೊಳಿಸಲಾಗಿದೆ. 20 ಎಚ್ಪಿ ಪಂಪ್ಗಳನ್ನು ಅಳವಡಿಸಿ ನೀರನ್ನು ಹೊರತೆಗೆಯಲಾಗುತ್ತಿದೆ ಎಂದು ಹೇಳಿದರು. ಸಮಸ್ಯೆಗಳಿರುವ ಪ್ರದೇಶಕ್ಕೆ ತೆರಳಿ ಪರಿಸ್ಥಿತಿ ನಿಭಾಯಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ದುಬೈ ಮತ್ತು ದೆಹಲಿಯಲ್ಲಿ ಅನುಸರಿಸುವ ಕ್ರಮಗಳನ್ನು ಅಧ್ಯಯನ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದರು.
ಪ್ರಕೃತಿಯ ಮುಂದೆ ನಾವು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅನೇಕ ರಾಜ್ಯಗಳಲ್ಲೂ ಈ ಪರಿಸ್ಥಿತಿ ಇದೆ. ಇದನ್ನು ಯಾರೂ ತಡೆಯಲು ಆಗುವುದಿಲ್ಲ. ನಿನ್ನೆ ಇಡೀ ರಾತ್ರಿ ನಮ ತಂಡ ಕೆಲಸ ಮಾಡಿದೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಒಂದು ಟ್ಯಾಂಕ್ ಒಡೆದುಹೋಗಿದೆ. ಮಹದೇವಪುರ ವಲಯದಲ್ಲಿ 5 ಬಡಾವಣೆಗಳು, ಬಸವಸಮಿತಿ, ಟಾಟಾ ನಗರ, ಚಂದ್ರಪ್ಪ ಲೇ ಔಟ್, ವೈನಂದ ಲೇ ಔಟ್, ಆಂಜನೇಯ ಲೇ ಔಟ್, ರಮಣಶ್ರೀ ಕ್ಯಾಲಿಫೋರ್ನಿಯಾ, ಸುರಭಿ ಲೇ ಔಟ್, ಕನಕನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತೊಂದರೆಗಳಾಗಿವೆ. ನಮ ಅಧಿಕಾರಿಗಳು ಎಲ್ಲಾ ಕಡೆ ತೆರಳಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಿಕೊಡುತ್ತೇವೆ ಎಂದರು.
ನೀರು ತರಲು ಹೋಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆಯಲ್ಲಿ ತಾಯಿಯ ಅಳಲು ನೋಡಿ ನನ್ನ ಮನ ಕಲುಕಿತು. ದೇವರ ಇಚ್ಛೆ. ನಮ ಅಧಿಕಾರಿಗಳು ಮಕ್ಕಳನ್ನು ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು. ಸಿ.ಪಿ.ಯೋಗೇಶ್ವರ್ ಬಿಜೆಪಿ ಸದಸ್ಯ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿರುವುದನ್ನು ನೋಡಿದ್ದೇನೆ. ಅವರಿನ್ನೂ ಬಿಜೆಪಿ ಬಿಟ್ಟಿಲ್ಲ. ಬೇರೆ ಪಕ್ಷದಲ್ಲಿರುವವರ ಬಗ್ಗೆ ನಾವು ಮಾತನಾಡಲಾಗುವುದಿಲ್ಲ.
ಒಂದು ವೇಳೆ ಕಾಂಗ್ರೆಸ್ ಸೇರ್ಪಡೆಯಾಗುವ ಪರಿಸ್ಥಿತಿ ಬಂದರೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ಅವರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದಿದೆ. ಬಿಜೆಪಿಯವರು ಯೋಗೇಶ್ವರ್ ಜೊತೆ ಚರ್ಚೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಅವರು ಪಕ್ಷ ಬಿಟ್ಟು ಬಂದ ಮೇಲೆ ನಾನು ಪರಿಶೀಲಿಸುತ್ತೇನೆ ಎಂದರು.