ಪಾಲಕ್ಕಾಡ್,ಅ. 23 (ಪಿಟಿಐ) ಕೇರಳದ ಪಾಲಕ್ಕಾಡ್- ಕೋಝಿಕೋಡ್ ರಾಷ್ಟ್ರೀಯ ಹೆದ್ದಾರಿಯ ಅಯ್ಯಪ್ಪನಕಾವು ಬಳಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಪಾಲಕ್ಕಾಡ್ ಕಡೆಯಿಂದ ಬರುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ನಂತರ ಕಾರು ಲಾರಿಯಡಿ ಸಿಲುಕಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೃತರಲ್ಲಿ ಕೆ ಕೆ ವಿಜೇಶ್ (35), ರಮೇಶ್ (31), ವಿಷ್ಣು (30), ಮತ್ತು ಮುಹಮ್ಮದ್ ಅಫ್ಸ್ ಲ್ (17) ಸೇರಿದ್ದಾರೆ. ಒಬ್ಬ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಜೇಶ್ ಆಟೋ ರಿಕ್ಷಾ ಚಾಲಕನಾಗಿದ್ದ ಎನ್ನಲಾಗಿದೆ.
ಕಾರಿನಲ್ಲಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಭಾರೀ ಮಳೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ಕೊಯಮತ್ತೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಾರು ಸಂಪೂರ್ಣ ಜಖಂಗೋಂಡಿದ್ದು, ವಾಹನವನ್ನು ಕಟ್ ಮಾಡಿ ಪ್ರಯಾಣಿಕರನ್ನು ಹೊರತೆಗೆಯಲಾಯಿತು. ಅಪಘಾತದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಅವಘಡದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಬುಧವಾರ ಮಧ್ಯಾಹ್ನದವರೆಗೆ ಪಾಲಕ್ಕಾಡ್ ವಿಧಾನಸಭಾ ಉಪಚುನಾವಣೆಯ ಪ್ರಚಾರವನ್ನುಸ್ಥಗಿತಗೊಳಿಸಿವೆ.