Wednesday, October 23, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanನಾಳೆಯಿಂದ ಹಾಸನಾಂಬೆ ಜಾತ್ರಾ ಮಹೋತ್ಸವ : ಸಕಲ ಸಿದ್ಧತೆ

ನಾಳೆಯಿಂದ ಹಾಸನಾಂಬೆ ಜಾತ್ರಾ ಮಹೋತ್ಸವ : ಸಕಲ ಸಿದ್ಧತೆ

Hassanambe Jatra Mahotsava from tomorrow All preparations

ಹಾಸನ,ಅ.23- ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ನಾಳೆಯಿಂದ ನವೆಂಬರ್ 3ರವರೆಗೆ ತೆರೆದಿರುತ್ತದೆ. ಹಾಸನಾಂಬ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ 9-12 ದಿನ ಮಾತ್ರ ದರ್ಶನ ನೀಡುವ ಪ್ರತೀತಿ ಹೊಂದಿರುವ ಹಾಸನಾಂಬ ದೇವಿ ನಾಡಿನಲ್ಲೆ ವಿಶೇಷ ಎನ್ನಬಹುದು.

ಹಾಸನಾಂಬ ಇತಿಹಾಸ:
ಹಾಸನ ನಗರದ ಅನುಪಮ ಪ್ರಭಾವದ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಗ್ರಾಮದೇವತೆ ಹಾಸನಾಂಬ ದೇವಿಯ ಸ್ಥಳ ಮಹಾತ್ಮೆ. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಃ ಗರೀಯಃ -ಅಂದರೆ ಜನನಿ ಮಾತೆ ಹಾಗು ಜನ್ಮ ಭೂಮಿ ಇರುವೆಡೆಯೆ ಸ್ವರ್ಗವಿದೆ ಎಂದರ್ಥ ಈ ಭರತ ಖಂಡದಲ್ಲಿ ಕೋಟ್ಯಾನು ಕೋಟಿ ದೇವತೆಗಳಿದ್ದರೂ ಮಾತೃದೇವತೆಯನ್ನೇ ಎಲ್ಲಕ್ಕಿಂತಾ ಮೊದಲ ಗೌರವ ನೀಡುತ್ತೇವೆ.

ಸುಮಾರು 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕನೆಂಬ ಪಾಳೇಗಾರನ ಕಾಲದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯದಲ್ಲಿ ಹಾಸನಾಂಬ ದೇವಿಯು ಹುತ್ತದ ರೂಪದಲ್ಲಿ ನೆಲಸಿದ್ದಾಳೆ. ಸುಂದರ ಶಿಲ್ಪ ಕಲೆಗಳಿಗೆ ಹೆಸಾರದ ಬೇಲೂರು, ಹಳೇಬೀಡು, ಶ್ರವಣಬೆಳಗೂಳಗಳನ್ನು ಒಳಗೂಂಡಿರುವ ಹಾಸನ ಜಿಲ್ಲೆಯ ಈ ದೇವಾಲಯದಲ್ಲಿ ಆ ರೀತಿಯ ವಿಶೇಷವಾದ ಶಿಲ್ಪಕಲಾ ವೈಭವವೇನೂ ಇಲ್ಲದಿದ್ದರೂ ದೇವಿಯ ಆರಾಧಕರೂ ನೂರಾರು ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ.

ದೇವಿಯ ಮಹಿಮೆಯನ್ನು ಅಪಾರವಾಗಿ ನಂಬುವ ಭಕ್ತ ಸಮೂಹವಿಲ್ಲಿದ್ದು, ನಂಬಿಕೆ, ಭಕ್ತಿ, ಮಹಿಮೆಗಳೆ ಇಲ್ಲಿನ ವೈಶಿಷ್ಟ್ಯವಾಗಿದೆ. ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡಲಾಗುವ ನೈವೇಧ್ಯವು ಮತ್ತೇ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆರೆದಾಗ ತಾಜಾ ಆಗಿ ಹಾಗೂ ದೇವರ ಎದುರಿನಲ್ಲಿರುವ ದೀಪವು ವರ್ಷವೀಡಿ ಉರಿಯುತ್ತಲೇ ಇರುತ್ತದೆ ಎಂಬ ಪ್ರತೀತಿ ಇದೆ.

ಹೊಯ್ಸಳರ ಕಾಲದ ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬ ದೇವಿಯನ್ನು ಭಕ್ತರು ಎಲ್ಲಾ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೂಮ್ಮೇ ಅಶ್ಬೀಜಮಾಸ ಪೊರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೆ ದಿನ ಬಾಗಿಲು ಮುಚ್ಚುವುದು. ಪುನಃ ಒಂದು ವರ್ಷದ ಕಾಲ ದೇವಿಯ ದರ್ಶನ ಸಿಗುವುದಿಲ್ಲ.

ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಹಾಸನದ ಹಿನ್ನಲೆ ಉಳ್ಳವರು ಈಗ ರಾಜ್ಯದ ಯಾವುದೇ ಬಾಗದಲ್ಲಿ ನೆಲಸಿದ್ದರೂ ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ನಾಳೆ ಮಧ್ಯಾಹ್ಯ 12 ಗಂಟೆಗೆ ಶಾಸ್ತ್ರೋಕ್ತವಾಗಿ ವಿಧಿ ವಿಧಾನಪೊರ್ವಕ ಮಂಗಳವಾಧ್ಯಗಳ ಉದ್ಘೋಷದೊಂದಿಗೆ ಹಾಸನಾಂಬೆಯ ದೇಗುಲದ ದ್ವಾರವನ್ನು ನಗರದ ಪ್ರಮುಖರ ಉಪಸ್ಥಿತಿಯಲ್ಲಿ ತೆರೆಯಲಾಗುವುದು.

ಈ ಸಮಯದಲ್ಲಿ ತಳವಾರ ಮನೆತನದವರು ಹಾಜರಿದ್ದು ಗರ್ಭಗುಡಿಯ ಮುಂದೆ ಅರಸು ಮನೆತನದವರಿಂದ ನೆಟ್ಟ ಬಾಳೆಕಂದನ್ನು 1996 ರಿಂದ ಈ ಕಾರ್ಯ ನಡೆಸುತ್ತಿರುವ ನರಸಿಂಹರಾಜ ಅರಸರವರು ದೇವಿಯನ್ನು ಭಜಿಸುತ್ತ ಒಂದೆ ಏಟಿನಲ್ಲಿ ಬಾಳೆಕಂದನ್ನು ಕತ್ತರಿಸಿದ ಕ್ಷಣದಲ್ಲಿ ದೇವಾಲಯದ ಬಾಗಿಲು ತೆರೆಯುವರು.

ದೇವಾಲಯದ ಬಾಗಿಲು ಅಕ್ಟೋಬರ್ 24 ರಂದು ತೆರೆದು ನ.3 ರಂದು ಮುಚ್ಚಲಾಗುವುದು. ಅ.25ರಿಂದ ನ.2 ರವರೆಗೆ ಮಾತ್ರ ಸಾರ್ವಜನಿಕರಿಗೆ ದರ್ಶದ ಅವಕಾಶ ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನ ದೇವಿಯ ದರ್ಶನ ಅವಕಾಶ ಇಲ್ಲ. ಮತ್ತೇ ಮುಂದಿನ ವರ್ಷ ಇದೇ ಸಮಯದಲಷ್ಟೇ ದೇವಾಲಯ ತೆರೆಯಲಾಗುವುದು.

ದೀಪಾವಳಿಯ ಮೊದಲ ದಿನ ದೇವಿಕೆರೆಯಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪೋತ್ಸವ, ಎರಡನೆದಿನ ಬಸವೇಶ್ವರ ಸ್ವಾಮಿಯ ರಥೋತ್ಸವ ನೆಡೆಯುತ್ತದೆ. ಪ್ರತಿವರ್ಷವೂ ಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿಯ ರಥೋತ್ಸವವಿರುತ್ತದೆ, ಇದನ್ನು ಹಾಸನಾಂಬೆ ದೇಗುಲದ ಬಾಗಿಲು ಮುಚ್ಚುವ ಹಿಂದಿನ ರಾತ್ರಿ ಅಮಾವಾಸ್ಯೆಯಂದು ಅಂದರೆ ನರಕಚತುರ್ದಶಿಯಂದು ಸಿದ್ದೇಶ್ವರ ಸ್ವಾಮಿಯ ರಾವಣೋತ್ಸವವು ನಗರದ ಮುಖ್ಯ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕೃತಗೊಂಡು ವಿಜೃಂಭಣೆಯಿಂದ ಸಂಚರಿಸುತ್ತದೆ.

ಇದರ ಪ್ರಮುಖ ಆಕರ್ಷಣೆಯೆಂದರೆ ಈಶ್ವರನು ರಾವಣನ ಹೆಗಲಮೇಲೆ ಸಂಚರಿಸುವುದು. ಈ ಸಂದರ್‌ದಲ್ಲಿ ಗ್ರಾಮೀಣ ಕುಣಿತಗಳಾದ ನಂದಿಧ್ವಜ,ವೀರಗಾಸೆ, ವೀರಭದ್ರನ ಖಡ್ಗ, ಕೀಲುಕುದುರೆ, ಕೂಂಬು – ಕಹಳೆಗಳು ವಿಜೃಂಭಿಸುತ್ತವೆ. ಕೊನೆಯದಿನ ಮುಂಜಾನೆಯ ಚುಮುಚುಮು ಚಳಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಕೆಂಡೋತ್ಸವ ಹಾಗು ವಿಶ್ವರೂಪದರ್ಶನ ಇರುತ್ತದೆ. ಆಕರ್ಷಕವಾದ ಪಟಾಕಿ ಬಾಣ-ಬಿರುಸುಗಳ ಪ್ರದರ್ಶನದಿಂದ ಆಕಾಶದಲ್ಲಿ ಮೂಡುವ ಬಣ್ಣಬಣ್ಣದ ಚಿತ್ತಾರಗಳು ನೋಡುಗರ ಮನಸೆಳೆಯುತ್ತದೆ.

RELATED ARTICLES

Latest News