ಮಂಗಳೂರು,ಅ.23- ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆ ನುಗ್ಗಿದ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಅಕ್ಕ ಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು ,ಮೂಡು ಬಿದಿರೆ ವಲಯ ಅರಣ್ಯಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಡ ರಾತ್ರಿ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ದಿಢೀರನೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ಅವರ ನಾಯಿ ಬೊಗಳಲು ಶುರು ಮಾಡಿದ್ದು ಮನೆಯವರು ಚಿರತೆ ನೋಡಿ ಕಂಗಾಲಾಗಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತಂಡ ಚಿರತೆ ಹಿಡಿಯಲು ಮುಂದಾಗಿದ್ದಾರೆ.ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿ ಮುಂಜಾನೆ ಸುಮಾರು 2.30ರ ವೇಳೆಗೆ ಚಿರತೆ ಬೋನಿನೊಳಗೆ ಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆ ಚಿರತೆಯನ್ನು ನೋಡಲು ಜನರ ದಂಡೇ ಸೇರಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು, ಮೂಲ್ಕಿ ಪೊಲೀಸರು ಮತ್ತು ಸಾರ್ವಜನಿಕರ ಸಹಕಾರದಿಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಅದೃಷ್ಟವಶಾತ್ ಚಿರತೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.