Sunday, November 24, 2024
Homeರಾಜಕೀಯ | Politicsಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ, ನಾಳೆ ನಾಮಪತ್ರ ಸಲ್ಲಿಕೆ

ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ, ನಾಳೆ ನಾಮಪತ್ರ ಸಲ್ಲಿಕೆ

CP Yogeshwar joins Congress, submits nomination papers tomorrow

ಬೆಂಗಳೂರು,ಅ.23-ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಇಂದು ಕಾಂಗ್ರೆಸ್ ಸೇರ್ಪಡೆಯಾ ಗಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.ನಿನ್ನೆ ಸಂಜೆ ಮೈಸೂರಿಗೆ ಆಗಮಿಸಿದ ಎಐಸಿಸಿಯ ಪ್ರಮುಖ ನಾಯಕರಾದ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದು, ಯೋಗೇಶ್ವರ್ ಸೇರ್ಪಡೆಗೆ ಹಸಿರು ನಿಶಾನೆ ಪಡೆದು ಕೊಂಡಿದ್ದರು.

ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಸಿ.ಪಿ.ಯೋಗೇಶ್ವರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಈ ಮೊದಲು ಹಲವು ಸಂದರ್ಭಗಳಲ್ಲಿ ಯೋಗೇಶ್ವರ್ ಕಾಂಗ್ರೆಸ್ಗೆ ಬಂದು ಹೋಗಿದ್ದಾರೆ. ಈಗ ಉಪಚುನಾವಣೆಯ ವೇಳೆ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆಯುವ ಮೂಲಕ ಎನ್ಡಿಎ ಮೈತ್ರಿಕೂಟಕ್ಕೆ ತೀವ್ರಾಘಾತ ನೀಡಿದ್ದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಎಲ್ಲಾ ರೀತಿಯ ಆಫರ್ಗಳನ್ನು ತಿರಸ್ಕರಿಸಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಲು ಮುಂದಾಗಿದ್ದಾರೆ.

ನಿನ್ನೆ ಚನ್ನಪಟ್ಟಣದಲ್ಲಿ ತಮ ಬೆಂಬಲಿಗರು ಹಾಗೂ ಹಿತೈಷಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿದ್ದು, ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದರು. ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಮೂಲಕ ನಾಳೆ ಕಾಂಗ್ರೆಸ್ನ ಬಿ ಫಾರಂನೊಂದಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರನ್ನು ಸೇರ್ಪಡೆ ಮಾಡಿಸಿಕೊಳ್ಳುವ ಸಲುವಾಗಿ ಡಿ.ಕೆ.ಶಿವಕುಮಾರ್ರವರು ವಯನಾಡಿನಲ್ಲಿ ಪ್ರಿಯಾಂಕ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲೂ ಭಾಗವಹಿಸದೆ ಬೆಂಗಳೂರಿನಲ್ಲೇ ಉಳಿದುಕೊಂಡರು. ಈ ಮೂಲಕ ಕಾಂಗ್ರೆಸ್ ಸಿ.ಪಿ.ಯೋಗೇಶ್ವರ್ರವರಿಗೆ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದು ಖಚಿತವಾಗಿದೆ.

ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ಸಿಗರು ಸಾಲುಗಟ್ಟಿ ನಿಂತಿದ್ದಾರೆ ಎಂದು ನಿನ್ನೆಯಷ್ಟೇ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಅದಕ್ಕೆ ತಕ್ಕಹಾಗೆ ಇಂದು ಸಿ.ಪಿ.ಯೋಗೇಶ್ವರ್ ಸೇರ್ಪಡೆಯಾಗಿದ್ದಾರೆ.

ರಾಮನಗರ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಳದ ವಿಧಾನಸಭಾ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಚನ್ನಪಟ್ಟಣದಲ್ಲಿ ಮಾತ್ರ ಜೆಡಿಎಸ್ನ ಕುಮಾರಸ್ವಾಮಿ ಗೆಲುವು ಕಂಡಿದ್ದರು. ಮರಳಿ ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ಹರಸಾಹಸ ನಡೆಸುತ್ತಿದೆ. ಅದಕ್ಕಾಗಿ ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ನಿಂದಲೇ ಬಿ ಫಾರಂ ನೀಡುವ ಆಹ್ವಾನವನ್ನು ನೀಡಲಾಗಿತ್ತು.

ಆದರೆ ಚನ್ನಪಟ್ಟಣದಲ್ಲಿ 25 ವರ್ಷಗಳಿಂದಲೂ ಕುಮಾರಸ್ವಾಮಿಯವರ ಪ್ರತಿಸ್ಪರ್ಧಿಯಾಗಿ ರಾಜಕಾರಣ ಮಾಡುತ್ತಾ ಬಂದಿರುವ ಸಿ.ಪಿ.ಯೋಗೇಶ್ವರ್ ಜೆಡಿಎಸ್ ಅಭ್ಯರ್ಥಿಯಾಗಲು ನಿರಾಕರಿಸಿದರು.

ಬಿಜೆಪಿಯಿಂದ ಬಿ ಫಾರಂ ನೀಡಬೇಕು. ಇಲ್ಲವಾದರೆ ತಾವು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದ್ದರು. ಜೆಡಿಎಸ್ ಚನ್ನಪಟ್ಟಣವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬಾರದು ಎಂಬ ತೊಳಲಾಟದಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಸಾಧ್ಯತೆಗಳ ಬಗ್ಗೆ ಅಂತಿಮ ಕ್ಷಣದವರೆಗೂ, ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿತ್ತು. ಆದರೆ ಎಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಚದುರಂಗದಾಟ ಆಡಿರುವ ಡಿ.ಕೆ.ಬ್ರದರ್ರಸ ಸಿ.ಪಿ.ಯೋಗೇಶ್ವರ್ ಅವರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲು ಕಾಂಗ್ರೆಸ್, ಜೆಡಿಎಸ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಅಧಿಕಾರದ ಪತನಕ್ಕಾಗಿ ನಡೆದ ಆಪರೇಷನ್ ಕಮಲದಲ್ಲಿನ ಹುರಿಯಾಳುಗಳ ತಂಡದಲ್ಲಿ ಸಿ.ಪಿ.ಯೋಗೇಶ್ವರ್ ಪ್ರಮುಖ ಪಾತ್ರದಾರಿಯಾಗಿದ್ದರು.
ವಿಧಾನಸಭಾ ಚುನಾವಣೆಯ ಬಳಿಕ ಜೆಡಿಎಸ್-ಬಿಜೆಪಿ ರಾಜಕೀಯ ಮೈತ್ರಿ ಚರ್ಚೆಗೆ ಮೊದಲು ಪ್ರಸ್ತಾವನೆ ಹಾಕಿದ್ದೂ ಕೂಡ ಇದೇ ಯೋಗೇಶ್ವರ್.

ಕೆಲವೊಮೆ ಜೆಡಿಎಸ್ಗೆ ಹಿತೈಷಿಯಾಗಿ ಮತ್ತೊಮೆ ಎದುರಾಳಿಯಾಗಿ ರಾಜಕಾರಣ ಮಾಡುತ್ತಾ ಚನ್ನಪಟ್ಟಣದಲ್ಲಿ ಪ್ರಬಲ ಹಿಡಿತ ಸಾಧಿಸಿರುವ ಸಿ.ಪಿ.ಯೋಗೇಶ್ವರ್ ಈಗ ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡುವ ಮೂಲಕ ಎನ್ಡಿಎ ಮಿತ್ರಕೂಟಕ್ಕೆ ಆಘಾತ ಮೂಡಿಸಿದ್ದಾರೆ.

RELATED ARTICLES

Latest News