Sunday, November 24, 2024
Homeಬೆಂಗಳೂರುಬೆಂಗಳೂರಲ್ಲಿ ಕಟ್ಟಡ ಕುಸಿತ ದುರಂತ, ಮೃತರ ಸಂಖ್ಯೆ 6ಕ್ಕೆ ಏರಿಕೆ, 13 ಮಂದಿ ರಕ್ಷಣೆ, ಇಬ್ಬರು...

ಬೆಂಗಳೂರಲ್ಲಿ ಕಟ್ಟಡ ಕುಸಿತ ದುರಂತ, ಮೃತರ ಸಂಖ್ಯೆ 6ಕ್ಕೆ ಏರಿಕೆ, 13 ಮಂದಿ ರಕ್ಷಣೆ, ಇಬ್ಬರು ವಶಕ್ಕೆ

6 Killed In Building Collapse After Heavy Rain In Bengaluru

ಬೆಂಗಳೂರು, ಅ.23- ನಗರದ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ಸಂಜೆ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದ್ದು ಇಂದು ಬೆಳಗ್ಗೆ ಒಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ.ಬಿಹಾರ ಮೂಲದ ಕಾರ್ಮಿಕರಾದ ಅರ್ಮಾನ್(26), ತ್ರಿಪಾಲ್(35), ಮೊಹಮದ್ ಸಾಯಿಲ್(19) ಮತ್ತು ಸತ್ಯರಾಜು(25), ಶಂಕರ್ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕನ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯಲ್ಲಿ ಜಗದೇವಿ(45), ರಶೀದ್(28), ನಾಗರಾಜು(25), ರಮೇಶ್ ಕುಮಾರ್(28),

ಅಜಯ್ ಮತ್ತು ಹರ್ಮಾನ್(22) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.30ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, 13 ಮಂದಿಯನ್ನು ಇದುವರೆಗೂ ರಕ್ಷಿಸಲಾಗಿದ್ದು, ಇನ್ನು ಹಲವು ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿಯಿಡಿ ಕಾರ್ಯಾಚರಣೆ ನಡೆದಿದ್ದು, ಬೆಳಗ್ಗೆಯಿಂದಲೂ ಮುಂದುವರೆದಿದೆ.

ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವು ಅವಘಡಗಳು ಸಂಭವಿಸುತ್ತಿರುವ ನಡುವೆಯೇ ನಿನ್ನೆ ಸಂಜೆ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ 60-40 ಸೈಟ್ನಲ್ಲಿ ನಿರ್ಮಾಣವಾಗುತ್ತಿದ್ದ ಆರು ಅಂತಸ್ತಿನ ಕಟ್ಟಡ ನೋಡನೋಡುತ್ತಿದ್ದಂತೆಯೇ ಕುಸಿದು ಬೀಳುತ್ತಿದ್ದಂತೆಯೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರ ಚೀರಾಟ ಕೇಳಿ ಬಂದಿದೆ.ಈ ಕಟ್ಟಡದಲ್ಲಿ ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21 ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಎನ್ಡಿಆರ್ಎಫ್ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿ 13 ಮಂದಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಇಬ್ಬರು ಕಾರ್ಮಿಕರ ಮೃತದೇಹವನ್ನು ಹಾಗೂ ಮಧ್ಯರಾತ್ರಿ ಮೂವರ ಮೃತದೇಹಗಳನ್ನು ಹಾಗೂ ಇಂದು ಮಧ್ಯಾಹ್ನ ಮತ್ತೊಬ್ಬ ಕಾರ್ಮಿಕನ ಶವ ಹೊರತೆಗೆಯಲಾಗಿದೆ.

ಆರು ಮಂದಿ ಕಾರ್ಮಿಕರಿಗೆ ತೀವ್ರ ಗಾಯವಾಗಿದ್ದು, ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡದ ಅವಶೇಷಗಳಡಿ ಕಾರ್ಮಿಕರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಹ್ಯಾಮರ್ ಮತ್ತು ಮೂರು ಜೆಸಿಬಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಎಫ್ಐಆರ್ ದಾಖಲು:
ಕಟ್ಟಡ ಕುಸಿತದ ಬಗ್ಗೆ ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಮೋಹನ್ ರೆಡ್ಡಿ, ಏಳುಮಲೈ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ತನಿಖೆ ಮುಂದುವರೆದಿದ್ದು ಭುವನರೆಡ್ಡಿ ಮತ್ತು ಮುನಿಯಪ್ಪ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರು ಮಲ್ಲೇಶ್ವರಂನಲ್ಲಿ ವಾಸವಾಗಿದ್ದು, ಇವರಿಗೆ ಸೇರಿದ ಕಟ್ಟಡ ಇದಾಗಿದೆ. ಈ ಜಾಗದಲ್ಲಿ 8 ತಿಂಗಳಿನಿಂದ ನಿರ್ಮಾಣ ಕಾಮಕಾರಿ ನಡೆಯುತ್ತಿದೆ. ನಿನ್ನೆ ಸಂಜೆ ಈ ಕಟ್ಟಡ ಏಕಾಏಕಿ ಪಾಯ ಸಮೇತ ಕುಸಿದು ಬಿದ್ದಿರುವುದು ಗೊತ್ತಾಗುತ್ತಿದ್ದಂತೆ ಕಟ್ಟಡ ಮಾಲೀಕ ಮುನಿರಾಜುರೆಡ್ಡಿ, ಮೋಹನ್ ರೆಡ್ಡಿ ಹಾಗೂ ಕಾಮಗಾರಿಯ ಗುತ್ತಿಗೆದಾರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಈ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೆಲಮಹಡಿಯಲ್ಲಿ ಪಾರ್ಕಿಂಗ್ ಬಿಟ್ಟು ಏಳು ಅಂತಸ್ತಿನ ನಿರ್ಮಾಣ ಆರೋಪ ಕೇಳಿಬಂದಿದೆ.

ಕಳಪೆ ಕಾಮಗಾರಿ ಶಂಕೆ:
ಕಟ್ಟಡ ಬುಡಮೇಲಾಗಿ ಉರುಳಿಬಿದ್ದಿರುವುದು ಗಮನಿಸಿದರೆ ಕಳಪೆ ಕಾಮಗಾರಿಯ ಶಂಕೆ ವ್ಯಕ್ತವಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES

Latest News