ಬೆಂಗಳೂರು,ಅ.24- ನಗರದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಸಾವು ನೋವುಗಳು ಸಂಭವಿಸಿರುವುದರ ನಡುವೆಯೇ ಲಿಫ್ಟ್ ಕಾಮಗಾರಿಗೆಂದು ತೋಡಿದ್ದ ಗುಂಡಿಗೆ ಬಿದ್ದು ಐದು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಮಂಗಲದ ನಿವಾಸಿ ಸುಹಾಸ್ ಗೌಡ(5) ಮೃತಪಟ್ಟ ಬಾಲಕ. ಮಳೆ ನಿಮಿತ್ತ ಶಾಲೆಗೆ ರಜೆ ನೀಡಲಾಗಿತ್ತು. ಹಾಗಾಗಿ ಗೆಳೆಯರೊಂದಿಗೆ ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸುಹಾಸ್ ಆಟವಾಡುತ್ತಿದ್ದ.
ಆ ವೇಳೆ ಆಯತಪ್ಪಿ ಡೈರಿ ಕಟ್ಟಡದಲ್ಲಿ ಲಿಫ್ಟ್ ಗೆಂದು ತೋಡಲಾಗಿದ್ದ 5 ಅಡಿ ಗುಂಡಿಯಲ್ಲಿ ಬಿದ್ದಿದ್ದಾನೆ. ಈ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಈತ ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ.
ಕೆಲ ಸಮಯದ ಬಳಿಕ ಸುಹಾಸ್ ಕಾಣಿಸಿಲ್ಲ. ಗೆಳೆಯರು ಮನೆಗೆ ಹೋಗಿರಬಹುದೆಂದು ಭಾವಿಸಿ ಸುಮ್ಮನಾಗಿ ಅವರ ಪಾಡಿಗೆ ಅವರು ಆಟವಾಡಿ ಮನೆಗೆ ಹೋಗಿದ್ದಾರೆ. ಸಂಜೆ ಸುಹಾಸ್ ಮನೆಯವರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಪತ್ತೆಯಾಗದಿದ್ದಾಗ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ತಡರಾತ್ರಿ ಬಾಲಕನ ಶವ ಗುಂಡಿಯಲ್ಲಿ ತೇಲುತ್ತಿದ್ದು ಕಂಡುಬಂದಿದೆ. ತಕ್ಷಣ ಬಾಲಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಯಿತು.
ಎಫ್ ಐ ಆರ್ ದಾಖಲು: ಈ ದುರಂತಕ್ಕೆ ಕಾರಣರಾದ ಮಿಲ್ಕ್ ಡೈರಿ ಅಧ್ಯಕ್ಷನ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಿಫ್ಟ್ ಕಾಮಗಾರಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರೂ ಸಹ ಸಿಬ್ಬಂದಿ ಯಾವುದೇ ಮುನ್ನಚರಿಕೆ ವಹಿಸದ ಕಾರಣ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.