ಬೆಂಗಳೂರು,ಅ.24- ಇತ್ತೀಚಿನ ದಿನಗಳ ರಾಜಕೀಯದಲ್ಲಿ ಒಂದೆ ಪಕ್ಷಕ್ಕೆ ನಿಷ್ಠರಾಗಿರುವುದು ಕಷ್ಟದ ವಿಚಾರ ಎಂದು ಹೇಳುವ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಕುತೂಹಲ ಕೆರಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಹಿತೈಶಿಗಳೂ ಅಲ್ಲ. ಇದು ಹರಿಯಾಣ, ಮಹಾರಾಷ್ಟ್ರದಲ್ಲಿ ನಡೆದಿದೆ. ಒಂದೇ ಪಕ್ಷಕ್ಕೆ ಬದ್ಧರಾಗಿರುತ್ತೇವೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಷ್ಟ. ಕೆಲವರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಆದರೆ ಕಾನೂನಿನಲ್ಲಿ ಪಕ್ಷಾಂತರಕ್ಕೆ ಅವಕಾಶವಿದೆ. ಇದನ್ನು ನಿಷೇಧ ಮಾಡಿದರೆ ನಿಂತು ಹೋಗಬಹುದು ಎಂದು ಹೇಳಿದರು.
ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದನ್ನು ಸ್ವಾಗತ ಮಾಡುತ್ತೇನೆ. ಅವರಿಗೆ ಹೈಕಮಾಂಡ್ ಈಗಾಗಲೇ ಟಿಕೆಟ್ ಘೋಷಣೆ ಮಾಡಿದೆ. ಇದು ಚನ್ನಪಟ್ಟಣದಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಲಿದೆ ಎಂದು ಹೇಳಿದರು.
ಯೋಗೇಶ್ವರ್ ಚನ್ನಪಟ್ಟಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಜನರಿಗೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ವಿದೆ. ಅವರು ಪಕ್ಷಕ್ಕೆ ಬಂದಿರುವುದು ಒಳ್ಳೆಯದಾಗುತ್ತದೆ. ಕಾಂಗ್ರೆಸ್‌ಗೆ ಯೋಗೇಶ್ವರ್ ಅನಿವಾರ್ಯವೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಕ್ಷೇತ್ರವನ್ನು ಗೆಲ್ಲುವುದು ಮುಖ್ಯ. ಅದಕ್ಕಾಗಿ ರಣನೀತಿ ಮಾಡುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್‌ಗೆ ಚನ್ನಪಟ್ಟಣ ಪರಿಚಿತ ಕ್ಷೇತ್ರ. ಪಕ್ಷದ ಹಿತದೃಷ್ಟಿಯಿಂದ ಕ್ರಮ ಕೈಗೊಂಡಿದ್ದಾರೆ. ಇದು ಅನಿವಾರ್ಯತೆ ಎನ್ನುವುದಕ್ಕಿಂತಲೂ ಅಗತ್ಯ ಎಂದು ಹೇಳಿದರು.ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಟೀಕೆ ಮಾಡುತ್ತಾರೆ. ಈ ಮೊದಲು ಯೋಗೇಶ್ವರ್ ಕಾಂಗ್ರೆಸ್‌ನಲ್ಲಿದ್ದರು ಎಂಬುದನ್ನು ಅವರು ಮರೆತಿದ್ದಾರೆ. ತಾತ್ಕಾಲಿಕವಾಗಿ ಬಿಜೆಪಿಗೆ ಹೋಗಿದ್ದರು. ಈಗ ವಾಪಸ್ ಬಂದಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಶನಿವಾರದವರೆಗೂ ಮಳೆಯಾಗುವ ನಿರೀಕ್ಷೆಯಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಮತ್ತು ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಹೆಚ್ಚಿನ ಮಳೆಯಿಂದ ಜನರಿಗೆ ತೊಂದರೆಯಾಗಿದೆ. ಮೂಲ ಸೌಕರ್ಯಗಳಿಗೆ ಹಾನಿಯುಂಟಾಗಿದೆ. ಅನಧಿಕೃತ ಕಟ್ಟಡವೊಂದು ಬಿದ್ದು ಹೋಗಿದೆ. 8 ಜನ ಮೃತಪಟ್ಟಿದ್ದಾರೆ. ಆದರೆ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ಹೇಳಿದರು.
ಶಿಗ್ಗಾವಿ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿದೆ. ಯಾರು ಗೆಲ್ಲುತ್ತಾರೆ ಎಂಬ ಮಾನದಂಡದ ಆಧಾರದ ಮೇಲೆ ಕಾರ್ಯಕರ್ತರ ಅಭಿಪ್ರಾಯ ಗಮನಿಸಿ ಟಿಕೆಟ್ ನೀಡಲಿದೆ ಎಂದರು.ಮಹರ್ಷಿ ವಾಲೀಕಿ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ನಾಗೇಂದ್ರ ಅವರ ಜಾಮೀನು ರದ್ದುಗೊಳಿಸುವಂತೆ ಜಾರಿ ನಿರ್ದೇಶನಾಲಯ
ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಜಾಮೀನು ರದ್ದು ಮಾಡಿದರೆ ಕಷ್ಟ. ಇ.ಡಿ.ಯವರ ಮೇಲನವಿಯನ್ನು ತಿರಸ್ಕರಿಸಿದರೆ ನಾಗೇಂದ್ರ ಸುರಕ್ಷಿತವಾಗಿರುತ್ತಾರೆ. ಉಳಿದಂತೆ ತನಿಖೆಯ ಪಾಡಿಗೆ ತನಿಖೆ ನಡೆಯುತ್ತದೆ ಎಂದು ಹೇಳಿದರು.