ಬೆಂಗಳೂರು, ಅ.29- ಹುಲಿ ಉಗುರು ಪೆಂಡೆಂಟ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಕರ್ನಾಟಕ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಲಿ ಉಗುರು ಪೆಂಡೆಂಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆಭರಣ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಚಿನ್ನಾಭರಣ ಅಂಗಡಿಗಳ ಮಾಲೀಕರು ಮತ್ತು ಅಕ್ಕಸಾಲಿಗರು ಭಯ ಭೀತರಾಗಿದ್ದಾರೆ ಎಂದರು.
ಈಗಾಗಲೇ ಸರ್ಕಾರ ಹಲವು ವಿಚಾರಗಳಲ್ಲಿ ವೈಫಲ್ಯ ಕಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾಡಿನ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಅರಣ್ಯ ಇಲಾಖೆ ಹುಲಿ ಉಗುರಿನ ಪೆಂಡೆಂಟ್ ವಿಚಾರದ ಹಿನ್ನೆಲೆಯಲ್ಲಿ ಜನರನ್ನು ದಿಕ್ಕು ತಪ್ಪಿಸಲು ಹೊರಟಿದೆ. ಹಿಂದೂ ಧರ್ಮದ ಆರ್ಚಕರನ್ನು, ಸಿನಿಮಾ ತಾರೆಯರನ್ನು, ರಾಜಕಾರಣಿಗಳನ್ನು ಟಾರ್ಗೆಟ್ ಮಾಡಲಾಗಿದೆ. ವನ್ಯಜೀವಿ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸದೇ ದಿಢೀರ್ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಆಭರಣ ಮಾಲೀಕರಿಗೆ ನೋಟಿಸ್ ನೀಡದೆ ಏಕಾಏಕಿ ದಾಳಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನೋಟಿಸ್ ನೀಡದೆ ಅರಣ್ಯ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಬಾರದು. ಪೆಂಡೆಂಟ್ ವಿಚಾರದಲ್ಲಿ ವಜಾಭರಣ ಅಂಗಡಿಗಳ ಮಾಲೀಕರಿಗೆ ಮಾನಸಿಕ ಕಿರುಕುಳ ನೀಡಿದರೆ. ರಾಜ್ಯವ್ಯಾಪಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಡಬೇಕಾದಿತು ಎಂದು ಎಚ್ಚರಿಸಿದರು.
ಕಾನೂನು ಎಲ್ಲರಿಗೂ ಸಮಾನ ಎಂದು ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಲಿ. ಅರಣ್ಯ ಉತ್ಪನ್ನ ಹೊಂದಿರುವ ವ್ಯಕ್ತಿಗಳು ತಾವಾಗಿಯೇ ಅದನ್ನು ಸರ್ಕಾರಕ್ಕೆ ವಾಪಸ್ ನೀಡಲು ಒಂದು ಗಡುವು ನೀಡಲಿ. ಜನರಿಗೆ ತಿಳುವಳಿಕೆ ನೀಡದೆ ಸಾರ್ವಜನಿಕರ ಮೇಲೆ ದಾಳಿ ನಡೆಸಿ, ಮೊಕದ್ದಮೆ ಹೂಡಲು ಹೊರಟಿರುವುದು ಸರಿಯಲ್ಲ.
ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ.37ಕ್ಕೆ ಏರಿಕೆ
ಹುಲಿ ಉಗುರು ಸೇರಿದಂತೆ ಕೆಲ ವನ್ಯಜೀವಿ ಉತ್ಪನ್ನಗಳಿಗೆ ಬಂಗಾರದ ಅಲಂಕಾರಿಕ ವಿನ್ಯಾಸ ಮಾಡುವ ಸಂಪ್ರದಾಯವಿದೆ. ಇದನ್ನು ಬಂಗಾರದ ಕವಚದಿಂದಲೂ ಅಲಂಕಾರ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಚಿನ್ನಾಭರಣ ಮಾರಾಟಗಾರರ ಮೇಲೆ ಕ್ರಮ ಜರುಗಿಸಲು ಹೊರಟಿರುವುದು ಸರಿಯಲ್ಲ ಎಂದರು.
ಇಂಡಿಯನ್ ಜ್ಯೂವೆಲರಿ ಅಸೋಸಿಯೇಷನ್ ಉಪಾಧ್ಯಕ್ಷ ಚೇತನ್ ಕುಮಾರ್ ಮೆಹ್ತಾ, ಬೆಂಗಳೂರು ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಗನ್ನಾ, ಸುಮೇಶ್ ವಡೇರಾ ಮತ್ತತಿರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.