ಮೈಸೂರು,ಅ.25- ಮುಡಾ ಪ್ರಕರಣದಲ್ಲಿ ಹಿಂದಿನ ಜಿಲ್ಲಾಧಿಕಾರಿ ಜಿ.ಕುಮಾರ್ ನಾಯ್ಕ್ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದು, ಕೆಸರೆ ಗ್ರಾಮದ ಜಮೀನಿನ ಸ್ಥಳ ಪರಿಶೀಲನೆಯನ್ನು ಮತ್ತೊಮೆ ನಡೆಸಿ ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಮತ್ತೊಮೆ ದೂರು ನೀಡಿರುವ ಅವರು, ಈ ಮೊದಲು ಸ್ಥಳ ಮಹಜರು ನಡೆಸಿದಾಗ ಅಲ್ಲಿ ಚರಂಡಿ ವ್ಯವಸ್ಥೆ, ರಸ್ತೆ ಹಾಗೂ ನಿವೇಶನ ಸಂಖ್ಯೆಗಳ ಕುರುಹುಗಳು ಕಾಣದಂತೆ ಗಿಡಗಳು ಬೆಳೆದಿದ್ದವು. ಅವುಗಳನ್ನು ತೆರವುಗೊಳಿಸಿ ಮತ್ತೊಮೆ ಸ್ಥಳ ಮಹಜರು ಮಾಡಬೇಕು ಮತ್ತು ಆ ಫೋಟೊ ಹಾಗೂ ವಿಡಿಯೋಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಮೊದಲು ಮುಡಾ ಈ ಜಮೀನನ್ನು ಸ್ವಾಧೀನಪಡಿಸಿಕೊಂಡು ಭೂ ಪರಿವರ್ತನೆ ಮಾಡಿತ್ತು. 12 ಮಂದಿಗೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಅದರ ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೃಷಿ ಭೂಮಿ ಎಂದು ಬಿಂಬಿಸುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಈ ರೀತಿ ಪರಿವರ್ತನೆಯಾಗಿರುವ ಭೂಮಿಗಳನ್ನು ಅನ್ಯಕ್ರಾಂತ ಉದ್ದೇಶಕ್ಕೆಂದು ಎಷ್ಟು ಜಮೀನುಗಳನ್ನು ನೊಂದಣಿ ಮಾಡಿಕೊಳ್ಳಲಾಗಿದೆ? ಜಿ.ಕುಮಾರ್ ನಾಯಕ್ ಅವರ ಅಧಿಕಾರ ಅವಧಿಯಲ್ಲಿ ಈ ರೀತಿಯ ಎಷ್ಟು ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಪರಿಶೀಲಿಸುವಂತೆ ಅವರು ಮನವಿ ಮಾಡಿದ್ದಾರೆ.