Friday, October 25, 2024
Homeರಾಜಕೀಯ | Politicsಉಪಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಬಂಡಾಯ ಭೀತಿ

ಉಪಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಬಂಡಾಯ ಭೀತಿ

Karnataka Byelection Politics

ಬೆಂಗಳೂರು,ಅ.25- ಮಾಡು ಇಲ್ಲವೇ ಮಡಿ ಎಂಬಂತಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯ ಭೀತಿ ಎದುರಾಗಿದೆ.ಆಡಳಿತಾರೂಢ ಕಾಂಗ್ರೆಸ್‌‍, ಬಿಜೆಪಿ ಹಾಗೂ ಜೆಡಿಎಸ್‌‍ನ ಅಭ್ಯರ್ಥಿಗಳಿಗೆ ಭಿನ್ನಮತ ಎದುರಾಗಿದ್ದು, ಬಂಡಾಯವನ್ನು ಶಮನಗೊಳಿಸುವುದೇ ಮೂರು ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ.

ನಾಮಪತ್ರ ಸಲ್ಲಿಕೆಗೆ ಇಂದು ಕಡೆಯ ದಿನವಾದ ಹಿನ್ನಲೆಯಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಭಾರೀ ಶಕ್ತಿಪ್ರದರ್ಶನ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು.ಇದೇ ತಿಂಗಳ 28ರಂದು ನಾಮಪತ್ರ ಪರಿಶೀಲನೆ ನಡೆಯುತ್ತಿದ್ದು, ಬುಧವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನ.13ರಂದು ಮತದಾನ ನಡೆದು 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕಾಂಗ್ರೆಸ್‌‍ ಮತ್ತು ಬಿಜೆಪಿಗೆ ಹೋಲಿಸಿದರೆ ಜೆಡಿಎಸ್‌‍ಗೆ ಅಂತಹ ದೊಡ್ಡ ಮಟ್ಟದ ಭಿನ್ನಮತವೇನೂ ಕಾಡುತ್ತಿಲ್ಲ. ಆದರೆ ಪಕ್ಷದ ಕಾರ್ಯಕರ್ತರು ಆಮಿಷಗಳಿಗೆ ಬಲಿಯಾಗಿ ಕೈ ಕೊಡಬಹುದೇ ಎಂಬ ಆತಂಕ ಕಾಡುತ್ತಿದೆ.

ನಾಮಪತ್ರ ಸಲ್ಲಿಕೆ: ರಾಜಕೀಯ ಜಿದ್ದಾಜಿದ್ದಿನ ಕುರುಕ್ಷೇತ್ರ ಎನಿಸಿರುವ ಒಕ್ಕಲಿಗರ ಭದ್ರಕೋಟೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರು ಅಬ್ಬರದ ರೋಡ್‌ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಕಾಂಗ್ರೆಸ್‌‍ಗೆ ಸಡ್ಡು ಹೊಡೆಯುವಂತೆ ಶಕ್ತಿ ಪ್ರದರ್ಶಿಸಿ, ಜೆಡಿಎಸ್‌‍, ಬಿಜೆಪಿಯ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಅಶ್ವಥ್‌ ನಾರಾಯಣ ಸೇರಿದಂತೆ ಉಭಯ ಪಕ್ಷಗಳ ಹಲವು ಮುಖಂಡರು ಭಾಗಿಯಾಗಿದ್ದರು. ಚನ್ನಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿದ ಬಳಿಕ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮಾಯಿ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿಕಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್‌ಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ, ಮಾಜಿ ಸಚಿವ ಭೈರತಿ ಬಸವರಾಜ್‌, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಅರವಿಂದ್‌ ಬೆಲ್ಲದ್‌, ಸಿ.ಸಿ.ಪಾಟೀಲ್‌,ಬಸನಗೌಡ ಪಾಟೀಲ್ ಯತ್ನಾಳ್‌ ಸೇರಿದಂತೆ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.

ಕಾಂಗ್ರೆಸ್‌‍ ಅಭ್ಯರ್ಥಿ ಯಾಸೀರ್‌ ಅಹಮದ್‌ ಪಠಾಣ್‌ ಕೂಡ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಮಾಡಿದರು. ಗಣಿ ಜಿಲ್ಲೆ ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಉಮೇದುವಾಗಿಕೆ ಮಾಡಿದರು. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ಎಂ.ಪಿ.ರೇಣಕಾಚಾರ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

ಬಂಡಾಯದ ಭೀತಿ:
ಮೂರು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಗಿದಿರುವ ಬೆನ್ನಲ್ಲೇ ಎಲ್ಲಾ ಪಕ್ಷಗಳಲ್ಲೂ ಬಂಡಾಯ ಬಾವುಟ ಹಾರಿದೆ. ಟಿಕೆಟ್‌ ಸಿಗದೆ ಅಸಮಧಾನಗೊಂಡಿರುವವರು ಬಂಡಾಯದ ಕಹಳೆ ಊದಿದ್ದಾರೆ. ಶಿಗ್ಗಾವಿಯಲ್ಲಿ ಬಸವರಾಜ್‌ ಬೊಮಾಯಿ ಅವರ ಆಪ್ತ ಹಾಗೂ ಟಿಕೆಟ್‌ ಆಕಾಂಕ್ಷಿ ಶ್ರೀಕಾಂತ್‌ ದುಂಡಿಗೌಡರ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶಿಗ್ಗಾಂವಿ ಕ್ಷೇತ್ರದಲ್ಲಿ ಇಂತಹ ಯಾವುದೇ ಬೆಳವಣಿಗೆಯಿಲ್ಲ ಎಂದು ಬಸವರಾಜ ಬೊಮಾಯಿ ಹೇಳಿದ್ದಾರೆ, ಮುಂಬರುವ ಉಪಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಾಗುವುದು ಎಂದಿದ್ದಾರೆ.

ತಮ ರಾಜಕೀಯ ಗುರು ಬಸವರಾಜ ಬೊಮಾಯಿ ಅವರು ನನಗೆ ಅನ್ಯಾಯ ಮಾಡಿದರು. ಟಿಕೆಟ್‌ ಕೊಡಿಸುವುದಾಗಿ ಹೇಳುತ್ತ, ತಮ ಮಗನಿಗೆ ಟಿಕೆಟ್‌ ಕೊಡಿಸಿದರು. ನನಗೆ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದ್ದಾರೆ. ನಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಸದ್ಯದಲ್ಲೇ ಹಿರಿಯರು ಮತ್ತು ಹಿತೈಷಿಗಳ ಸಭೆ ಕರೆದಿರುವೆ. ಅವರ ಅಭಿಪ್ರಾಯ ಪಡೆದು ನನ್ನ ನಿರ್ಧಾರ ಪ್ರಕಟಿಸುವೆ ಎಂದು ಹೇಳಿರುವುದು ಬಿಜೆಪಿ ಅಭ್ಯರ್ಥಿಗೆ ನಿದ್ದೆಗೆಡುವಂತೆ ಮಾಡಿದೆ.

ಇನ್ನೊಂದೆಡೆ ಕಾಂಗ್ರೆಸ್‌‍ನಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಅಜಂಪಿರ್‌ ಖಾದ್ರಿ ಬಂಡಾಯದ ಕಹಳೆ ಊದಿದ್ದಾರೆ. ಅವರನ್ನು ಮನವೊಲಿಸುವ ಪ್ರಯತ್ನ ಮುಂದುವರೆದಿದೆ.

ಪ್ರತಿಷ್ಠಿತ ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ವಿರುದ್ಧ ಸ್ಪರ್ಧಿಸಿದ್ದ ನಿಖಿಲ್‌ ಸೋಲು ಕಂಡಿದ್ದರು. ತನ್ನ ತಾಯಿಯ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ನಿಖಿಲ್‌ಗೆ ರಾಮನಗರದಲ್ಲೂ ಸೋಲಾಗಿತ್ತು.

ಕಾಂಗ್ರೆಸ್‌‍ ಅಭ್ಯರ್ಥಿ ಇಕ್ವಾಲ್‌ ಹುಸೇನ್‌ ವಿರುದ್ಧ ನಿಖಿಲ್‌ ಸೋಲನ್ನು ಕಂಡಿದ್ದರು. ಈ ಸೋಲು ನಿಖಿಲ್‌ ಕುಮಾರಸ್ವಾಮಿಗೆ ರಾಜಕೀಯವಾಗಿ ಭಾರೀ ಹಿನ್ನಡೆಯನ್ನು ಉಂಟು ಮಾಡಿತ್ತು. ತನ್ನ ತಾಯಿ ಶಾಸಕರಾಗಿದ್ದ ಕ್ಷೇತ್ರದಲ್ಲೂ ಅವರಿಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೊಮೆ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ನಿಖಿಲ್‌ಗೆ ಟಿಕೆಟ್‌ ನೀಡಲಾಗಿದೆ. ನಿಖಿಲ್‌ ಗೆಲುವಿಗಾಗಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಶ್ರಮಿಸುವಂತೆ ಎಚ್‌ಡಿ ದೇವೇಗೌಡರು ಸೂಚನೆ ನೀಡಿದ್ದಾರೆ. ಅಲ್ಲದೆ, ತಾನೇ ಸ್ವತಃ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಆದರೂ ಕ್ಷೇತ್ರ ಅಂದುಕೊಂಡಷ್ಟು ಸುಲಭವಿಲ್ಲ. ಎಚ್‌ಡಿಕೆ ವಿರೋಧಿಗಳೆಲ್ಲರೂ ಒಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಿಖಿಲ್‌ ಗೆಲುವು ಸುಲಭ ಸಾಧ್ಯವೇ ಎಂಬುವುದು ಪ್ರಶ್ನೆಯಾಗಿದೆ.

RELATED ARTICLES

Latest News