Sunday, November 24, 2024
Homeರಾಜಕೀಯ | Politicsಸ್ಪೆಷಲ್ ಪೂಜೆ, ಅದ್ದೂರಿ ರೋಡ್‌ ಶೋ ಮೂಲಕ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ನಾಮಪತ್ರ ಸಲ್ಲಿಕೆ

ಸ್ಪೆಷಲ್ ಪೂಜೆ, ಅದ್ದೂರಿ ರೋಡ್‌ ಶೋ ಮೂಲಕ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ನಾಮಪತ್ರ ಸಲ್ಲಿಕೆ

NDA candidate Nikhil Kumaraswamy offers prayers ahead of nomination filing

ಬೆಂಗಳೂರು/ಚನ್ನಪಟ್ಟಣ,ಅ.25-ರಾಷ್ಟ್ರದ ಗಮನ ಸೆಳೆದಿರುವ ಗೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಶಕ್ತಿ ಪ್ರದರ್ಶನದ ಮೂಲಕ ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಇಂದು ತಮ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಗಲ್‌ ಆಂಜನೇಯಸ್ವಾಮಿ ದೇವಾಲಯದಲ್ಲಿ ಪತ್ನಿ ರೇವತಿ ಹಾಗೂ ಪುತ್ರ ಸಹಿತ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಪಟ್ಟಣದ ಸೇರುವ ಹೋಟೆಲ್‌ ವೃತ್ತದಿಂದ ಪಟ್ಟಣದಲ್ಲಿ ಅದ್ದೂರಿ ರೋಡ್‌ ಶೋ ನಡೆಸಿದರು. ನಂತರ ತಹಸೀಲ್ದಾರ್‌ ಕಚೇರಿಗೆ ತೆರಳಿ ಉಪ ಚುನಾವಣೆಯ ಚುನಾವಣಾಧಿಕಾರಿ ಹಾಗೂ ಚನ್ನಪಟ್ಟಣ ತಹಸೀಲ್ದಾರ್‌ ಬಿನೋಯ್‌ ಪಿ.ಕೆ.ಅವರಿಗೆ ಜೆಡಿಎಸ್‌‍ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಪತ್ನಿ ರೇವತಿ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಚನ್ನಪಟ್ಟಣದಲ್ಲಿ ಸಹಸ್ರಾರು ಬಿಜೆಪಿ ಮತ್ತು ಜೆಡಿಎಸ್‌‍ ಕಾರ್ಯಕರ್ತರು ರೋಡ್‌ಶೋನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬಿಜೆಪಿ ಮತ್ತು ಜೆಡಿಎಸ್‌‍ ಶಕ್ತಿ ಪ್ರದರ್ಶನವನ್ನು ಮಾಡಿ ಒಗ್ಗಟ್ಟು ಪ್ರದರ್ಶಿಸಿದವು. ರೋಡ್‌ ಶೋ ನಡೆದ ಸಂದರ್ಭದಲ್ಲಿ ಕಿಲೋಮೀಟರ್‌ವರೆಗೂ ಜನರಿದ್ದ ದೃಶ್ಯ ಕಂಡುಬಂತು. ಜನವೋ ಜನ ಎಂದು ಮಾತನಾಡಿಕೊಳ್ಳುವಷ್ಟು ಜನರಿದ್ದರು.

ನಿನ್ನೆ ಕಾಂಗ್ರೆಸ್‌‍ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ನಡೆಸಿದ ರೋಡ್‌ ಶೋಗಿಂತ ಇಂದು ಹೆಚ್ಚು ಜನರು ಇದ್ದದ್ದು, ಕಂಡುಬಂದಿತು.ರೋಡ್‌ ಶೋ ಉದ್ದಕ್ಕೂ ನಿಖಿಲ್‌ ಕುಮಾರಸ್ವಾಮಿ ಹಾಗೂ ಉಭಯ ಪಕ್ಷಗಳ ಪರವಾಗಿ ಜಯಘೋಷಣೆಯನ್ನು ಕಾರ್ಯಕರ್ತರು ಕೂಗಿದರು. ಬಿಜೆಪಿ ಮತ್ತು ಜೆಡಿಎಸ್‌‍ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಉತ್ಸಾಹದಿಂದ ಮುನ್ನಡೆಯುತ್ತಿದ್ದರು.

ತೆರೆದ ವಾಹನದಲ್ಲಿ ನಡೆದ ರೋಡ್‌ ಶೋನಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರೊಂದಿಗೆ ಹೆಚ್‌.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಡಿ.ವಿ.ಸದಾನಂದಗೌಡ, ಸಂಸದರಾದ ಡಾ. ಸಿ. ಎನ್‌. ಮಂಜುನಾಥ್‌, ಮಲ್ಲೇಶ್‌ಬಾಬು,ಡಾ.ಕೆ.ಸುಧಾಕರ್‌, ಯದುವೀರ್‌ ಕೃಷ್ಣ ದತ್ತ ಒಡೆಯರ್‌,ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಶಾಸಕ ಎ.ಮಂಜು ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌‍ನ ಸ್ಥಳೀಯ ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಉಭಯ ಪಕ್ಷಗಳ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚು ಮತಗಳನ್ನು ಗಳಿಸಿ ಜಯಗಳಿಸುತ್ತಾರೆ. ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಮತದಾರರ ಮನವೊಲಿಸಬೇಕು. ಮತದಾರರು ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ದೇವೇಗೌಡರ ಕುಟುಂಬದಿಂದ ಲಕ್ಷ್ಮೀವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸುವ ಮುನ್ನ ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರ ದೇಗುಲದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಕುಟುಂಬದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಮತ್ತು ಅವರ ಪತ್ನಿ ರೇವತಿ ನಿಖಿಲ್‌ ಅವರು ಭಾಗಿಯಾಗಿದ್ದರು.ಪೂಜೆಯ ನಂತರ ಮಾತನಾಡಿದ ಹೆಚ್‌.ಡಿ. ದೇವೇಗೌಡರು ಮಾತನಾಡಿ, ನಾವು ದೇವರಲ್ಲಿ ಮೊದಲಿನಿಂದಲೂ ನಂಬಿಕೆ ಇಟ್ಟುಕೊಂಡಿದ್ದೇವೆ. ನಮ ಇಡೀ ವಂಶ ಭಗವಂತನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಇವತ್ತು ಮೊಮಗ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಮೊದಲು ಪೂಜೆ ಕೈಂಕರ್ಯಗಳನ್ನು ಸಲ್ಲಿಸಿ, ಭಗವಂತನ ಆರ್ಶೀವಾದ ಪಡೆದಿದ್ದೇವೆ ಎಂದರು.

ಹೆಚ್‌.ಡಿ.ಕುಮಾರಸ್ವಾಮಿ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸುತ್ತಾರೆ. ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ ಅಭ್ಯರ್ಥಿಗಳನ್ನು ಜನರು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸೌಹಾರ್ದತೆಯನ್ನು ತಂದಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ ಅಭಿವೃದ್ಧಿ ಆಗುತ್ತಿದೆ. ದೇಶದಲ್ಲಿ ಒಳ್ಳೆಯ ವಾತಾವರಣವಿದ್ದು, ಅದು ನಮಗೂ ಸಹಾಯವಾಗಲಿದೆ. ಸೋಲು, ಗೆಲುವು ಚುನಾವಣೆಯಲ್ಲಿ ಸಹಜ. ಇದು ಕಾರ್ಯಕರ್ತರ ಚುನಾವಣೆ. ಕಳೆದ ಬಾರಿ ಕಾಂಗ್ರೆಸ್‌‍ನ ಕುತಂತ್ರಿಗಳಿಂದ ನಿಖಿಲ್‌ ಸೋತಿದ್ದಾರೆ. ಈ ಬಾರಿ ಕುತಂತ್ರಿಗಳ ಮಾತನ್ನು ಜನರು ಕೇಳುವುದಿಲ್ಲ. ನಿಖಿಲ್‌ ಅವರನ್ನು ಗೆಲ್ಲಿಸುತ್ತಾರೆ.

ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಭಗವಂತನ ಆಶೀರ್ವಾದದಿಂದ ಗೆಲುವು ಸಾಧಿಸುತ್ತೇವೆ ಎಂದು ಅವರು ಹೇಳಿದರು.ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ದೇವರಲ್ಲಿ ಒಳ್ಳೆಯ ಪ್ರಾರ್ಥನೆ ಮಾಡಿದ್ದೇನೆ. ತಾತ ದೇವೇಗೌಡರು, ತಂದೆ ಕುಮಾರಣ್ಣ, ಪತ್ನಿ ರೇವತಿ ಜೊತೆಗೂಡಿ ಪೂಜೆ ನೆರವೇರಿಸಿದ್ದೇನೆ. ನಮ ಮೈತ್ರಿಗೆ ತೊಂದರೆ ಆಗದಂತೆ ನಾವು ಗೆಲ್ಲುತ್ತೆವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ಉಳಿಸುವ ಕೆಲಸ ಮಾಡುತ್ತೇನೆ.

ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ದೇವರಲ್ಲಿ ಪೂಜೆ ಮಾಡಿದ್ದೇನೆ. ನನ್ನ ಪರವಾಗಿ ಎರಡು ಪಕ್ಷದ ಕಾರ್ಯಕರ್ತರು ಅತೀ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು,ಗೆಲುವು ಸಾಮಾನ್ಯ. ನನಗೆ ಸಂಪೂರ್ಣ ವಿಶ್ವಾಸವಿದ್ದು, ಚನ್ನಪಟ್ಟಣದಲ್ಲಿ ಒಬ್ಬ ಯುವಕನಿಗೆ ಕೆಲಸ ಮಾಡಲು ಜನರು ಅವಕಾಶ ನೀಡುತ್ತಾರೆ. ಕಾಂಗ್ರೆಸ್‌‍ ಅಭ್ಯರ್ಥಿ ಯೋಗೇಶ್ವರ್‌ ಬಗ್ಗೆ ನಾನು ಮಾತನಾಡಲ್ಲ. ಮುಂದಿನ ತಿಂಗಳು ಮತದಾರ ಪ್ರಭುಗಳು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿರುವುದಾಗಿ ಅವರು ಹೇಳಿದರು.

RELATED ARTICLES

Latest News