Sunday, November 24, 2024
Homeಬೆಂಗಳೂರುಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸಿದರೆ ದೂರು ನೀಡಿ

ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸಿದರೆ ದೂರು ನೀಡಿ

Complain that private passenger vehicles have increased ticket rate

ಬೆಂಗಳೂರು,ಅ.26- ದೀಪಾವಳಿ ಹಬ್ಬದ ಪ್ರಯುಕ್ತ ಸರದಿ ಸಾಲಿನ ರಜೆಗಳ ಹಿನ್ನಲೆಯಲ್ಲಿ ಖಾಸಗಿ ಪ್ರಯಾಣಿಕ ವಾಹನಗಳು ಟಿಕೆಟ್ ದರ ಹೆಚ್ಚಿಸಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಅಪರ ಸಾರಿಗೆ ಆಯುಕ್ತ (ಪ್ರವರ್ತನ) (ದಕ್ಷಿಣ) ರಾದ ಸಿ.ಮಲ್ಲಿಕಾರ್ಜುನ ಅವರು ಮೆಜೆಸ್ಟಿಕ್‌ನಲ್ಲಿ ಪರಿಶೀಲನೆ ನಡೆಸಿದರು.

ಖಾಸಗಿ ಬಸ್‌ಗಳಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಂದ ಮಾಹಿತಿ ಪಡೆದ ಅಪರ ಸಾರಿಗೆ ಆಯುಕ್ತರು, ಹೆಚ್ಚಿನ ದರ ವಿಧಿಸುವ ಟ್ರಾವೆಲ್‌ಗಳ ಬಗ್ಗೆ ದೂರು ನೀಡುವಂತೆ ಕರೆ ನೀಡಿದರು. ಈಗಾಗಲೇ ನಿನ್ನೆ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಅಪರ ಸಾರಿಗೆ ಆಯುಕ್ತರು (ಪ್ರವರ್ತನ) (ದಕ್ಷಿಣ), ಇವರ ಉಪಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಪಡೆಯದಂತೆ ನಿರ್ದೇಶನ ನೀಡಲಾಗಿತ್ತು.

ಆದಾಗ್ಯೂ ದುಪ್ಪಟ್ಟು ಹಣವನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡುವಂತಹ ವಾಹನಗಳ ಮಾಲೀಕರ ಮೇಲೆ ರಹದಾರಿ (ಪರ್ಮಿಟ್ಸ್ ) ಮತ್ತು ನೋಂದಣಿ ಪತ್ರವನ್ನು (ಆರ್.ಸಿ.) ಅಮಾನತ್ತುಪಡಿಸಲು ಹಾಗೂ ಟಿಕೆಟ್ ವಿತರಕರು (ಟಿಕೆಟ್ ಬುಕ್ಕಿಂಗ್ ಆ್ಯಪ್) ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನಿಸಿದೆ.

ಈ ಹಿನ್ನಲೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ದೂರು ನೀಡಬೇಕು ಎಂದು ತಿಳಿಸಿದರು.
ಇದಲ್ಲದೆ ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಪೋಟಕ ಸಾಮಾಗ್ರಿಗಳು ಹಾಗೂ ಇತರೆ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರುಗಳ ವಿರುದ್ಧ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುವುದೆಂದು ಈ ಮೂಲಕ ಸೂಚಿಸಿದರು.

ಖಾಸಗಿ ಬಸ್ ಸಂಘಗಳು ಸಾಮಾನ್ಯಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಸಂಗ್ರಹಿಸುವುದು ಕಂಡುಬಂದಲ್ಲಿ ಸಾರ್ವಜನಿಕರು ಸಾರಿಗೆ ಇಲಾಖೆಯ 9449863429 ಹಾಗೂ 9449863426 ಮೂಲಕ ನಿಯಂತ್ರಣ ಕೊಠಡಿಗೆ ಕಚೇರಿಯ ಸಮಯದಲ್ಲಿ ಕರೆ ಮಾಡಿ ದೂರು ನೀಡಬಹುದು ಅಥವಾ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಿಗೆ ದೂರು ದಾಖಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.

RELATED ARTICLES

Latest News