Sunday, October 27, 2024
Homeಮನರಂಜನೆಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಬಿಡುಗಡೆ

Dheera Bhagat Roy Trailer Launch

ಬೆಂಗಳೂರು,ಅ.27- ಸಾಮಾಜಿಕ ತಲ್ಲಣ ಹಾಗೂ ಹೋರಾಟದ ಹಿನ್ನಲೆಯ ಕಥಾಹಂದರವನ್ನು ಹೊಂದಿರುವ ಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಅನ್ನು ನಟ, ನಿರ್ಮಾಪಕ, ನಿರ್ದೇಶಕ ವಿಜಯ್‌ಕುಮಾರ್‌ ಅನಾವರಣಗೊಳಿಸಿದರು. ನಗರದ ಪ್ರಸನ್ನ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ, ಕಾಂಗ್ರೆಸ್‌‍ ಮುಖಂಡ ಸುಧೀರ್‌ ಕುಮಾರ್‌ ಮುರೋಳಿ, ಅಭಿಮಾನಿ ಸಂಸ್ಥೆಯ ಅನಿಲ್‌ ಹೊಸಕೊಪ್ಪ, ಸಾಮಾಜಿಕ ಕಾರ್ಯಕರ್ತರಾದ ಭಾಸ್ಕರ್‌ ಪ್ರಸಾದ್‌, ಹರಿರಾಂ, ನಿರ್ದೇಶಕ ಕರ್ಣನ್‌(ಅರುಣ್‌), ನಾಯಕನಟ ರಾಕೇಶ್‌ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

ದುನಿಯಾ ವಿಜಯ್‌ ಮಾತನಾಡಿ, ಗೂಗಲ್‌ನಿಂದಲೇ ಎಲ್ಲವನ್ನೂ ತಿಳಿದುಕೊಳ್ಳಬಹುದು ಎಂಬ ಆಧುನಿಕ ಕಾಲದಲ್ಲಿ ಸಿನಿಮಾ ಮಾಧ್ಯಮದ ಮೂಲಕವೂ ಅಮೋಘ ಕಥೆಗಳನ್ನು ಹೇಳುವ ಚಿತ್ರಗಳಿಗೆ ಜನರ ಬೆಂಬಲ ಬೇಕು. ಧೀರ ಭಗತ್‌ರಾಯ್‌ ಹೋರಾಟದ ನೆಲೆ, ಸಾಮಾಜಿಕ ನ್ಯಾಯ, ಸಮಾನತೆಯ ಅಂಶಗಳನ್ನು ಪ್ರತಿಪಾದಿಸುತ್ತವೆ. ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇಲ್ಲದೇ ಇದ್ದರೆ ಏನೆಲ್ಲಾ ಆಗುತ್ತಿತ್ತು ಎಂಬುದನ್ನು ನೆನೆಸಿಕೊಂಡರೆ ಆತಂಕವಾಗುತ್ತದೆ. ಈ ಚಿತ್ರ ಅತ್ಯುತ್ತಮ ಮಾದರಿಯಲ್ಲಿ ಸಿದ್ಧಗೊಂಡಿದೆ ಎಂದರು.

ಮಾಜಿ ಸಚಿವ ಆಂಜನೇಯ ಮಾತನಾಡಿ, ಉಳುವವನೇ ಭೂಮಿಯ ಒಡೆಯ ಕಾಯ್ದೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ನ್ಯಾಯ ಒದಗಿಸಿದೆ. ಅನ್ಯಾಯಕ್ಕೊಳಗಾದ ಕೋಟ್ಯಂತರ ಮಂದಿ ಜೀವನ ಕಟ್ಟಿಕೊಂಡಿದ್ದಾರೆ. ಅಂತಹ ಕಾನೂನನ್ನು ಸಮರ್ಥವಾಗಿ ಜಾರಿಗೊಳಿಸಿದ್ದು ಉಕ್ಕಿನ ಮಹಿಳೆ ಇಂದಿರಾಗಾಂಧಿ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ರಾಜ್ಯದಲ್ಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಧ್ವನಿ ಇಲ್ಲದಿದ್ದವರಿಗೆ, ಶಕ್ತಿ ಇಲ್ಲದಿದ್ದವರಿಗೆ ಈ ಕಾಯ್ದೆ ಹೊಸ ಚೈತನ್ಯ ನೀಡಿದ್ದು, ಸಮಾನತೆಯ ದಿಕ್ಕಿನೆಡೆಗೆ ಸಾಗುವಂತೆ ಮಾಡಿತ್ತು. ಸಂಪತ್ತಿನ ಸಮಾನ ಹಂಚಿಕೆಯ ಸೂತ್ರವನ್ನು ಸಹಕಾರಗೊಳಿಸಿತ್ತು. ಅಂತಹ ಐತಿಹಾಸಿಕ ವಿಚಾರಗಳ ಕಥಾಹಂದರಗಳಿರುವ ಚಿತ್ರಗಳು ಹೆಚ್ಚಾಗಬೇಕು ಎಂದರು.

ಈ ಹಿಂದೆ ಅತ್ಯುತ್ತಮ ಚಿತ್ರಗಳು ಸಾಮೂಹಿಕವಾಗಿ ಉತ್ತಮ ಪರಿಣಾಮ ಬೀರುತ್ತಿದ್ದವು. ಅಂತಹ ಚಿತ್ರಗಳನ್ನು ನೋಡಿಕೊಂಡು ಸುಧಾರಣೆಯಾದ ಬಹಳಷ್ಟು ಉದಾಹರಣೆಗಳಿವೆ ಎಂದು ಹೇಳಿದರು.

ಸುಧೀರ್‌ ಮುರೋಳಿ ಮಾತನಾಡಿ, ಧೀರ ಭಗತ್‌ರಾಯ್‌ ಸೋಲಿನ ಕಥೆಯಲ್ಲ. ಸಂವಿಧಾನದ ಶಕ್ತಿಯನ್ನು ಹೇಳುವ ಸಿನಿಮಾ. ವಿಚಾರದ ಜೊತೆ ರಾಜಿಯಾಗದೆ ಜನರಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚುವ ಸಂಕಲ್ಪವನ್ನು ಈ ಚಿತ್ರ ಮಾಡಿದೆ ಎಂದು ವಿಶ್ಲೇಷಿಸಿದರು.
ನಿರ್ದೇಶಕ ಕರ್ಣ ಚಿತ್ರವನ್ನು ಡಿಸೆಂಬರ್‌ ವೇಳೆಗೆ ಬಿಡುಗಡೆ ಮಾಡಲಾಗುವುದು. ಚಿತ್ರ ಅತ್ಯುದ್ಭುತವಾಗಿ ಮೂಡಿಬಂದಿದೆ. ಇದಕ್ಕೆ ತಾಂತ್ರಿಕ ಬಳಗದ ಶ್ರಮ ಅಪಾರವಾಗಿದೆ ಎಂದರು.

ಬೆಂದು ನೊಂದವರ ಸುತ್ತ ಧೀರ ಭಗತ್‌ ರಾಯ್‌
ತನ್ನ ಪ್ರಜೆಗಳನ್ನು ಕಾಪಾಡಲು ಸಿಡಿದೆದ್ದು ನಿಂತ ಒಬ್ಬ ಮಹಾನ್‌ ನಾಯಕ, ಭೂ ಸುಧಾರಣೆ, ಜಮೀನ್ದಾರಿ ಪದ್ಧತಿ, ಜೀತ ಪದ್ಧತಿ, ಜಾತಿ ವ್ಯವಸ್ಥೆಯಂತಹ ಸಾಮಾಜಿಕ ವಿಚಾರಗಳ ಸುತ್ತ ಎದ್ದು ನಿಂತ ದೃಶ್ಯ ವೈಭವ. ಸಾಯೋದಾದ್ರೆ ಹೋರಾಟ ಮಾಡಿ ಸಾಯಿ, ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ ಎಂದು ಸಮಾನತೆಯನ್ನು ಸಾರುವ ಡೈಲಾಗ್‌ಗಳು ಚಿತ್ರದಲ್ಲಿವೆ.

ನೊಂದು ಬೆಂದವರ ಜೀವನಗಳ ತಳಮಟ್ಟದ ವೇದನೆಗಳಿಗೆ ಸಿನಿ ರೂಪ ಕೊಟ್ಟು , ಆಧುನಿಕ ಯುಗದಲ್ಲೂ ಅವುಗಳ ಪ್ರಸ್ತುತತೆಯನ್ನು ಸಾಮಾನ್ಯ ಜನರಿಗೆ ತಲುಪಿಸಲು ಹೊರಟಿರುವ ಈ ಚಿತ್ರವನ್ನು ವೈಟ್‌ ಲೋಟಸ್‌‍ ಎಂಟರ್‌ಟೈನ್‌ಮೆಂಟ್‌ ಮತ್ತು ಶ್ರೀ ಓಂ ಸಿನಿ ಎಂಟರ್‌ಟ್ರೈನರ್ಸ್‌ ನಿರ್ಮಾಣ ಸಂಸ್ಥೆಗಳ ಮೂಲಕ ಪ್ರವೀಣ್‌ ಗೌಡ ಹಗಡೂರು ಮತ್ತು ಶ್ರೀನಾಥ್‌ ಪಾಟೀಲ್‌ ನಿರ್ಮಾಣ ಮಾಡಿದ್ದಾರೆ.

ನಾಯಕನಾಗಿ ದಳವಾಯಿ ಮತ್ತು ನಾಯಕಿಯಾಗಿ ಸುಚರಿತ ಸಹಾಯ ರಾಜ್‌ ಕಾಣಿಸಿಕೊಂಡರೆ ಹಿರಿಯ ನಟ ಶರತ್‌ ಲೋಹಿತಾಶ್ವ ಕೂಡ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಮಾಜಿಕ ಅಂಶಗಳ ನಡುವೆ ಒಂದಿಷ್ಟು ರೋಮ್ಯಾಂಟಿಕ್‌ ಅಂಶಗಳಿಗೆ ಚಿತ್ರದಲ್ಲಿ ಒತ್ತುಕೊಡಲಾಗಿದ್ದು, ಆ ಜವಾಬ್ದಾರಿಯನ್ನು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮಾಡಿದ್ದಾರೆ. ದಮನಿತರ ಹೋರಾಟದ ಕಥೆಯಾಗಿರುವ ಧೀರ ಭಗತ್‌ ರಾಯ್‌ ಡಿಸೆಂಬರ್‌ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

RELATED ARTICLES

Latest News