ನವದೆಹಲಿ,ಅ.28- ಶಬರಿಮಲೆ ಯಾತ್ರಾರ್ಥಿಗಳು ಇನ್ನು ಮುಂದೆ ವಿಮಾನದಲ್ಲಿ ಇರುಮುಡಿ ಸಾಗಿಸಲು ಕೇಂದ್ರ ಸರ್ಕಾರ ತಾತ್ಕಲಿಕ ಅನುಮತಿ ನೀಡಿದೆ. ಯಾತ್ರಾರ್ಥಿಗಳ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ನಾಗರೀಕ ವಿಮಾನ ಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಮಾಹಿತಿ ನೀಡಿದ್ದಾರೆ.
ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳು ಇನ್ನು ಮುಂದೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತಮ್ಮ ಇರುಮುಡಿಯನ್ನು ಕೊಂಡೊಯ್ಯಬಹುದು ಎಂದು ಅವರು ಹೇಳಿದ್ದಾರೆ. ಶಬರಿಮಲೆಗೆ ನವೆಂಬರ್‌ನಿಂದ ಜನವರಿ ತಿಂಗಳಲ್ಲಿ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಹಾಗಾಗಿ 2025ರ ಜನವರಿ 20ರವರೆಗೆ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ಇರುಮುಡಿ ತೆಗೆದುಕೊಂಡು ಪ್ರಯಾಣಿಸಬಹುದು. ಇದು ಸೀಮಿತ ಅವಽಯವರಿಗೆ ಮಾತ್ರ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಂಡಲಂ -ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಇರುಮುಡಿ ಕಟ್ಟಿರುವ ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಇನ್ನು ಈ ಆದೇಶವು ಜನವರಿ 20ರವರೆಗೆ ಮಾತ್ರವೇ ಮಾನ್ಯವಾಗಿರುತ್ತದೆ. ಇರುಮುಡಿಯನ್ನು ವಿಮಾನಗಳಲ್ಲಿ ಸಾಗಿಸುವ ಮುನ್ನ ಎಕ್ಸ್-ರೇ, ಇಟಿಡಿ (ಎಕ್ಸೊ ಪ್ರೊಸೆಸಿವ್ ಟ್ರೇಸ್ ಡಿಟೆಕ್ಟರ್) ಹಾಗೂ ಭೌತಿಕ ತಪಾಸಣೆ ಸೇರಿದಂತೆ ಭದ್ರತಾ ತಪಾಸಣೆಗಳ ನಂತರ ವಿಮಾನದಲ್ಲಿ ಸಾಗಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.