Friday, November 22, 2024
Homeರಾಜ್ಯಚಾಲಕ-ನಿರ್ವಾಹಕರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ

ಚಾಲಕ-ನಿರ್ವಾಹಕರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ

Minister Ramalinga Reddy letter to the police to take serious cases of assault on driver-Conductor

ಬೆಂಗಳೂರು,ಅ.28- ನಗರದಲ್ಲೀಚೆಗೆ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಮೂರು ಪ್ರಕರಣಗಳನ್ನು ಉಲ್ಲೇಖಿಸಿರುವ ಸಾರಿಗೆ ಸಚಿವರು ಇಂತಹ ಘಟನೆಗಳು ನಡೆದಾಗ ತಕ್ಷಣವೇ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಬೇಕೆಂದು ಸೂಚಿಸಿದ್ದಾರೆ.ಇದೇ ಅ.1ರಂದು ಐಟಿಪಿಎಲ್ ಬಸ್ ನಿಲುಗಡೆಯ ಬಳಿ ಚಾಲಕ ಕಂ ನಿರ್ವಾಹಕ ಯೋಗೇಶ್ ಎಂಬುವರ ಮೇಲೆ ಹರ್ಷ ಸಿನ್ಹ ಎಂಬ ವ್ಯಕ್ತಿ ಹಲ್ಲೆ ನಡೆಸಿ ಹಿಂಸಾತ್ಮಕವಾಗಿ ವರ್ತಿಸಿದ್ದು, ಬಸ್ನಿಂದ ಎಲ್ಲರೂ ಕೆಳಗಿಳಿಯುವಂತೆ ಬೆದರಿಸಿದ್ದನು.

ಅ.18 ರಂದು ಮಧ್ಯಾಹ್ನ ಚಾಲಕ ಮತ್ತು ನಿರ್ವಾಹಕ ಊಟ ಮಾಡುತ್ತಿದ್ದ ಸಮಯದಲ್ಲಿ ಹೇಮಂತ್ ಎಂಬಾತ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾನೆ. ಇತರ ಸಿಬ್ಬಂದಿಗಳು ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಮೂರು ದಿನಗಳ ಹಿಂದೆ ಪಾಸ್ ತೋರಿಸುವ ವಿಚಾರವಾಗಿ ನಿರ್ವಾಹಕನೊಂದಿಗೆ ಜಗಳವಾಗಿದ್ದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿರುವುದಾಗಿ ಆರೋಪಿ ತಿಳಿಸಿದ್ದಾನೆ.

ಅ.26 ರಂದು ಯಲಹಂಕದಿಂದ ಶಿವಾಜಿನಗರಕ್ಕೆ ಬರುವ ವಾಹನದಲ್ಲಿ ಸ್ಟಾನರಿ ರಸ್ತೆಯ ಬಳಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಬಸ್ ಮುಂಭಾಗದಿಂದ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ಪ್ರಶ್ನಿಸಿದ ನಿರ್ವಾಹಕನನ್ನೂ ಥಳಿಸಲಾಗಿದೆ. ಗಾಯಗೊಂಡ ಚಾಲಕ, ನಿರ್ವಾಹಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಘಟನೆಗಳನ್ನು ಸಚಿವರು ವಿವರಿಸಿದ್ದಾರೆ.ಬಿಎಂಟಿಸಿ ಚಾಲಕರು, ನಿರ್ವಾಹಕರು ನಗರದ ಜೀವನಾಡಿಗಳಿದ್ದಂತೆ. ಹಗಲಿರುಳು ಶ್ರಮಿಸುತ್ತಿರುವ ಅವರ ಮೇಲೆ ಹಲ್ಲೆ ನಡೆಯುತ್ತಿರುವುದು ವಿಷಾದನೀಯ.

ಇದರಿಂದ ಚಾಲಕರು, ನಿರ್ವಾಹಕರು ನಿರಾತಂಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಇಂತಹ ಪ್ರಕರಣಗಳತ್ತ ಗಮನ ಹರಿಸಬೇಕು. ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚಿಸಿದ್ದಾರೆ.

RELATED ARTICLES

Latest News