ಬೆಂಗಳೂರು,ಅ.28- ಸುಸಂಸ್ಕೃತವಾದ ಹೆಣ್ಣುಮಕ್ಕಳು ಪ್ರಶ್ನೆ ಕೇಳಿದರೆ ಉತ್ತರ ನೀಡುತ್ತೇನೆ. ದಮ್ಮು , ತಾಕತ್ತು ಎಂದು ಮಾತನಾಡುವವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದಿದ್ದರೂ ಹೆಣ್ಣುಮಕ್ಕಳು ತಾಕತ್ತು, ಧಮು ಎಂದು ಮಾತನಾಡಿದವರನ್ನು ನಾನು ನೋಡಿಲ್ಲ. ಹೆಣ್ಣು ಮಕ್ಕಳೆಂದರೆ ಕ್ಷಮಯಾ ಧರಿತ್ರಿ, ಭಾರತಾಂಬೆ, ಕನ್ನಡಾಂಬೆ ಎಂದೆಲ್ಲಾ ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಾಕತ್ತು, ದಮು ಎಂದು ಸವಾಲು ಹಾಕುತ್ತಾರೆ. ಹೆಣ್ಣು ಮಕ್ಕಳು ಈ ರೀತಿ ಮಾತನಾಡುತ್ತಾರೆ ಎಂಬ ಬಗ್ಗೆ ನನಗೆ ಅರಿವೇ ಇಲ್ಲ. ಇಂತಹುದಕ್ಕೆಲ್ಲಾ ಉತ್ತರಿಸುವುದಿಲ್ಲ ಎಂದು ಹೇಳಿದರು.
ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಈ ಮೊದಲೇ ಹೇಳಿದ್ದೇನೆ. ಅದನ್ನು ಪಾಲಿಸುತ್ತೇನೆ. ಸೂಕ್ತ ಸಮಯದಲ್ಲಿ ದಾಖಲೆಯನ್ನು ಹೊರಹಾಕುತ್ತೇನೆ. ದಮು, ತಾಕತ್ತು ಎಂದು ಹೇಳಿದಾಕ್ಷಣ ಅದಕ್ಕೆ ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದರು.