ಬೆಂಗಳೂರು, ಅ.28– ಪರಭಾಷೆ ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸುವ ಚಿತ್ರಮಂದಿರಗಳು ಟಿಕೆಟ್ ಬೆಲೆಯನ್ನು 200 ರೂ.ಗಳಿಗಿಂತ ಹೆಚ್ಚಿಸಬಾರದು. ಇದನ್ನು ಮೀರಿದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಎಚ್ಚರಿಸಿದರು.
ಚಿತ್ರಮಂದಿರಗಳಲ್ಲಿ ಅನ್ಯ ಭಾಷಾ ಚಿತ್ರಗಳಿಗೆ ಬೇಕಾಬಿಟ್ಟಿ ಟಿಕೆಟ್ ದರವನ್ನು ನಿಗದಿಪಡಿಸಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಧೋರಣೆ ವಿರುದ್ಧ ವಾಣಿಜ್ಯ ಮಂಡಳಿ ಮುಂದೆ ನಡೆಯುತ್ತಿರುವ ಧರಣಿ ಕುರಿತು ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಟಿಕೆಟ್ ದರ 150ಕ್ಕಿಂತಲೂ ಹೆಚ್ಚಿಲ್ಲ. ಆದರೆ ಕರ್ನಾಟಕದಲ್ಲಿ ಅನ್ಯ ಭಾಷಾ ಸಿನಿಮಾಗಳು ಬಿಡುಗಡೆಯಾದಾಗ 1500 ರೂ. ಗಳಿಂದ 2000 ರೂ.ಗಳವರೆಗೂ ಟಿಕೆಟ್ ಬೆಲೆ ಹೆಚ್ಚಿಸುತಿದ್ದಾರೆ.
ಈ ಹಣ ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳ ಪಾಲಾಗುತ್ತಿದೆ ಎಂದು ದೂರಿದರು.ಈ ಅನ್ಯಾಯದ ಕುರಿತು 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಹೇಳಿಕೊಂಡಾಗ, ಅವರು ಟಿಕೆಟ್ ದರವನ್ನು 200 ರೂ.ಗಳಿಗೆ ನಿಗದಿ ಮಾಡಿ ಆದೇಶ ಹೊರಡಿಸಿದರು. ಆದೇಶ ಗೃಹ ಇಲಾಖೆಯಿಂದ ಬರಬೇಕಿತ್ತು. ಆದರೆ ವಾರ್ತಾ ಇಲಾಖೆಯಿಂದ ಬಂದಿದ್ದರಿಂದ ಥಿಯೇಟರ್ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದರು.
ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುವುದರಿಂದ ಹಿಂದೆ ಆಗಿರುವ ತಪ್ಪನ್ನು ಅವರ ಬಳಿ ಹೇಳಿಕೊಂಡಾಗ, ಕೂಡಲೆ ಸ್ಪಂದಿಸಿ ಗೃಹ ಇಲಾಖೆಯಿಂದಲೇ ಆದೇಶ ಕಳಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಕಾದು ನೋಡುತ್ತೇವೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ ಎಂದರು.
ಚಿತ್ರಮಂದಿರಗಳು ಕೂಡಲೇ ಎಚ್ಚೆತ್ತುಕೊಂಡು ಪರಭಾಷೆಗಳಿಗೆ ಯಾವುದೇ ಕಾರಣಕ್ಕೂ ಟಿಕೆಟ್ ದರವನ್ನು 200 ರೂ.ಗಳಿಗಿಂತ ಹೆಚ್ಚು ಮಾಡಬಾರದು. ನಾವು ನೀವು ಅಣ್ಣತಮಂದಿದ್ದರಂತೆ. ಇಬ್ಬರಿಗೂ ತೊಂದರೆ ಆಗಬಾರದು. ಅನ್ಯ ಭಾಷೆಗಳ ಸಿನಿಮಾಗಳನ್ನು ತರುವ ವಿತರಕರು ನಮವರೇ. ಇದನ್ನು ಮನಗಂಡು ಸ್ಪಂದಿಸಬೇಕು. ಇಲ್ಲವಾದಲ್ಲಿ ಪ್ರತಿ ಚಿತ್ರಮಂದಿರಕ್ಕೂ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.