Saturday, November 23, 2024
Homeರಾಷ್ಟ್ರೀಯ | National2025ರಲ್ಲಿ ಬಹು ನಿರೀಕ್ಷಿತ ಜನಗಣತಿ ಆರಂಭ ನಿರೀಕ್ಷೆ

2025ರಲ್ಲಿ ಬಹು ನಿರೀಕ್ಷಿತ ಜನಗಣತಿ ಆರಂಭ ನಿರೀಕ್ಷೆ

Centre To Begin Census In 2025, Delimitation Of Lok Sabha Seats By 2028

ನವದೆಹಲಿ,ಅ.28- ಬಹುನಿರೀಕ್ಷಿತ ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆ ಯಾದ ಜನಗಣತಿಯನ್ನು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 2025ರಲ್ಲಿ ಆರಂಭಿಸುವ ನಿರೀಕ್ಷೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಾಗಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನಲೆಯಲ್ಲಿ 2025ರಿಂದ 26ರವರೆಗೆ ಅಂದರೆ ಒಂದು ವರ್ಷ ದೇಶಾದ್ಯಂತ ಜನಗಣತಿಯನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ.

ನಿಯಮಗಳ ಪ್ರಕಾರ ಪ್ರತಿ 10 ವರ್ಷಕ್ಕೊಮೆ ಕೇಂದ್ರ ಸರ್ಕಾರ ಅಧಿಕೃತವಾಗಿ ಜನಗಣತಿಯನ್ನು ನಡೆಸುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು. ಆದರೆ ದೇಶದಲ್ಲಿ ಕೋವಿಡ್ ಮಹಾಮಾರಿ ಕಾಣಿಸಿಕೊಂಡಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದೆ. ಲೋಕಸಭಾ ಪುನರ್ ವಿಂಗಡನೆಯೊಂದಿಗೆ ಮಹಿಳಾ ಮೀಸಲಾತಿ ಸಹ ಜಾರಿಗೆ ಬರಲಿದೆ.

ಮುಂಬರುವ ಜನಗಣತಿ ಸುತ್ತಿನಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಎಣಿಕೆಗಳೊಂದಿಗೆ ಧರ್ಮ ಮತ್ತು ಸಾಮಾಜಿಕ ವರ್ಗದ ಸಾಮಾನ್ಯ ಸಮೀಕ್ಷೆಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ ಮುಂದಿನ ವರ್ಷದ ಜನಗಣತಿಯು ಸಾಮಾನ್ಯ ಮತ್ತು ಎಸ್ಸಿ-ಎಸ್ಟಿ ವರ್ಗಗಳೊಳಗಿನ ಉಪ-ಪಂಗಡಗಳನ್ನೂ ಸಮೀಕ್ಷೆ ಮಾಡಬಹುದು ಎಂದು ಮೂಲಗಳು ಸೂಚಿಸಿವೆ.

ಹೆಚ್ಚು ವಿಳಂಬವಾಗಿರುವ ಜನಗಣತಿ ಪ್ರಕ್ರಿಯೆಗಳ ತಕ್ಷಣದ ಆರಂಭದ ಸುಳಿವು ನೀಡುತ್ತಾ, ಪ್ರಸ್ತುತ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೃತುಂಜಯ್ ಕುಮಾರ್ ನಾರಾಯಣ್ ಅವರ ಕೇಂದ್ರ ನಿಯೋಜನೆಯನ್ನು ಇತ್ತೀಚೆಗೆ ಆಗಸ್ಟ್ 2026ರವರೆಗೆ ವಿಸ್ತರಿಸಲಾಗಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದಶಮಾನದ ಜನಗಣತಿಯನ್ನು ನಡೆಸುವ ಸಂಭವನೀಯತೆಯ ಕುರಿತು ಅದನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವುದು. ನಿರ್ಧರಿಸಿದ ನಂತರ ಅದನ್ನು ಹೇಗೆ ಮಾಡಲಾಗುವುದು ಎಂಬುದನ್ನು ನಾನು ಪ್ರಕಟಿಸುತ್ತೇನೆ ಎಂದು ಹೇಳಿದ್ದರು. ಮುಂದಿನ ರಾಷ್ಟ್ರೀಯ ಜನಗಣತಿಯನ್ನು ಮೊಬೈಲ್ ಫೋನ್ ಅಪ್ಲಿಕೇಶನ್ ಮೂಲಕ ಸಂಪೂರ್ಣವಾಗಿ ಡಿಜಿಟಲ್ ಆಗಿ ಮಾಡಲಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದರು.

ಕಳೆದ ಜನಗಣತಿಯು ಭಾರತದಲ್ಲಿ 121 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ದಾಖಲಿಸಿದೆ. ಇದು ಶೇಕಡಾ 17.7 ರ ಬೆಳವಣಿಗೆ ದರವನ್ನು ಪ್ರತಿಬಿಂಬಿಸುತ್ತದೆ.ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ವೇಳೆ ಕರ್ನಾಟಕ ಸಹಿತ ದಕ್ಷಿಣದ ರಾಜ್ಯಗಳ ಕಳವಳಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ಜನಸಂಖ್ಯೆ ಆಧರಿತವಾಗಿ ಕ್ಷೇತ್ರ ಪುನರ್ವಿಂಗಡಣೆಯಾದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಕೂಗಿಗೆ ಕೇಂದ್ರ ಸ್ಪಂದಿಸಿದಂತಾಗಿದೆ.

ದೇಶದಲ್ಲಿ ಈವರೆಗೆ ಒಟ್ಟು 4 ಬಾರಿ ಕ್ಷೇತ್ರ ಪುನರ್ವಿಂಗಡಣೆ ಆಯೋಗಗಳನ್ನು ರಚಿಸಲಾಗಿತ್ತು. 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ 489 ಇದ್ದ ಲೋಕಸಭೆ ಕ್ಷೇತ್ರಗಳು, ಅನಂತರ ನಡೆದ ಮರುವಿಂಗಡಣೆ ಪ್ರಕ್ರಿಯೆಯಿಂದ ಈಗ ಒಟ್ಟು ಕ್ಷೇತ್ರಗಳ ಸಂಖ್ಯೆ 543ಕ್ಕೇರಿದೆ.ದಕ್ಷಿಣದ ರಾಜ್ಯಗಳ ಆಕ್ಷೇಪ ಏಕೆ: ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ವಿವಿಧ ಕುಟುಂಬ ಯೋಜನೆ ಕ್ರಮಗಳ ಮೂಲಕ ಜನಸಂಖ್ಯೆಯ ಏರಿಕೆಗೆ ಈಗಾಗಲೇ ಕಡಿವಾಣ ಹಾಕಿವೆ.

ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಏರುತ್ತಲೇ ಇವೆ. ಜನಸಂಖ್ಯೆ ಆಧರಿಸಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆಯಾದರೆ, ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸೀಟುಗಳು ಲಭ್ಯವಾಗಲಿವೆ. ಲೋಕಸಭಾ ಸೀಟುಗಳ ಲಭ್ಯತೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿವೆ.

ಅಲ್ಲದೆ ಸಂಸತ್ನಲ್ಲಿ ದಕ್ಷಿಣದ ಪ್ರಾತಿನಿಧ್ಯವೂ ಕುಗ್ಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ಈ ರಾಜ್ಯಗಳ ದನಿ ಕ್ಷೀಣಿಸಲಿದೆ. ಈ ತಾರತಮ್ಯವು ಕೇವಲ ಸಂಸತ್ ಸ್ಥಾನಗಳಿಗೆ ಸೀಮಿತವಾಗಿರದೇ, ಬೇರೆ ಬೇರೆ ರೀತಿಯಲ್ಲಿ ಅಸಮಾನತೆಗೆ ದಾರಿಮಾಡಿ ಕೊಡಲಿದೆ ಎಂಬುದು ದಕ್ಷಿಣದ ರಾಜ್ಯಗಳ ಅಳಲು.

RELATED ARTICLES

Latest News