ಬೆಂಗಳೂರು,ಅ.28- ಬೆಳಕಿನ ಹಬ್ಬ ದೀಪಾವಳಿಗೂ ಮೊದಲೇ ಕೆಲವು ಸ್ಥಳಗಳಲ್ಲಿ ಶೇ.25ರ ರಿಯಾಯಿತಿಯಲ್ಲಿ ಬೇಳೆಕಾಳು, ಅಕ್ಕಿ, ಗೋಧಿ ಹಿಟ್ಟು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ದೇಶದಲ್ಲಿ ಬೇಳೆಕಾಳುಗಳ ಬೆಲೆ ವೇಗವಾಗಿ ಏರುತ್ತಿರುವ ಸಂದರ್ಭದಲ್ಲಿ ಸಾರ್ವಜನಿ ಕರಿಗೆ ಅನುಕೂಲ ಕಲ್ಪಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ತೀರ್ಮಾನ ತೆಗೆದು ಕೊಂಡಿದೆ.
ಬೆಂಗಳೂರು ನಗರದಲ್ಲಿ ಭಾರತ್ ಉತ್ಪನ್ನಗಳ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದ್ದು, ಅ.30ರಿಂದ ಭಾರತ್ ಉತ್ಪನ್ನಗಳ ಬಿಡುಗಡೆ ಮತ್ತು ಮಾರಾಟ ಆರಂಭವಾಗಲಿದೆ.ಎನ್ಸಿಸಿಎಫ್ಐನಿಂದ ನೂರಕ್ಕೂ ಹೆಚ್ಚು ಸ್ಥಳದಲ್ಲಿ ರಿಯಾಯಿತಿ ದರದಲ್ಲಿ ಭಾರತ್ ಉತ್ಪನ್ನಗಳ ಮಾರಾಟವಾಗಲಿದೆ. ಅಲ್ಲದೇ ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಯೋಜನೆಯಡಿ ಏನೆಲ್ಲಾ ದೊರೆಯಲಿದೆ?:
ಅಕ್ಕಿ ಕೆಜಿಗೆ 34 ರೂ., ಗೋದಿ ಹಿಟ್ಟು 30 ರೂ., ಬೇಳೆ 70 ರೂ., ಹೆಸರು ಬೇಳೆ – 107 ರೂ (ಕೆಜಿಗೆ)ಗೆ ಲಭ್ಯವಾಗಲಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಅಕ್ಕಿ ಕೆಜಿಗೆ 55 ರೂ.ನಿಂದ 60 ರೂ., ಗೋದಿ ಹಿಟ್ಟು 45ರಿಂದ 50, ಬೇಳೆ 90ರಿಂದ 100 ರೂ, ಹೆಸರುಬೇಳೆ 120 ರೂ.ಗಳಿಗೆ ಮಾರಾಟವಾಗುತ್ತಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ತನ್ನ ಸಬ್ಸಿಡಿ ಬೇಳೆಕಾಳು ಕಾರ್ಯಕ್ರಮವನ್ನು ವಿಸ್ತರಿಸಿದೆ ಕಡಲೆ ಮತ್ತು ಬೇಳೆಯನ್ನು ಕಡಿಮೆ ಬೆಲೆಗೆ ನೀಡುತ್ತದೆ. ಈ ಉಪಕ್ರಮದೊಂದಿಗೆ ಕಡಲೆ, ಮೂಂಗ್ ಮತ್ತು ಮಸೂರ್ ದಾಲ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.ಭಾರತ್ ಉತ್ಪನ್ನಗಳನ್ನು ಸರ್ಕಾರದ ಕೋ ಆಪರೇಟಿವ್ ರಿಟೇಲ್ ಮಳಿಗೆಗಳು ಹಾಗೂ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಖರೀದಿಸಬಹುದಾಗಿದೆ.