ಹಾಸನ,ಅ.29- ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರಕ್ಕೆ ಆಗಮಿಸುವಂತೆ ನನಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ತಿಳಿಸಿದರು.
ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ಹೋಗುವ ಬಗ್ಗೆ ಇನ್ನೂ ನಾನು ಯಾವುದೇ ತೀರ್ಮಾನಗಳನ್ನು ಮಾಡಿಲ್ಲ. ನನ್ನ ಕ್ಷೇತ್ರದಲ್ಲಿ ಕೆಲಸಗಳ ಒತ್ತಡದಲ್ಲಿ ಇದ್ದೇನೆ. ಮುಂದೆ ನೋಡೋಣ, ಮೈಸೂರಿನಲ್ಲಿ ತುಂಬಾ ಕೆಲಸದ ಒತ್ತಡದಲ್ಲಿದ್ದೇನೆ. ಹಾಗಾಗಿ ನಾನು ಯಾವುದೇ ಚುನಾವಣೆ ಪ್ರಚಾರಕ್ಕೆ ಹೋಗಿಲ್ಲ ಎಂದರು.
ಚನ್ನಪಟ್ಟಣ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ, ಚುನಾವಣೆ ಬಗ್ಗೆ ಮಾಹಿತಿ ಪಡೆದಿಲ್ಲ, ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದಿಲ್ಲ, ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.
ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಪಡೆದಿದ್ದೇನೆ. ಹಾಸನಾಂಬೆ ದೇವಿ ದೇವಾಲಯದ ಬಾಗಿಲು ತೆರೆಯುವಾಗ ಜ್ಯೋತಿ ಉರಿಯುತ್ತಿರುತ್ತದೆ, ಹೂವು ಬಾಡಿರುವುದಿಲ್ಲ, ಎಲ್ಲಾ ಜನರಿಗೂ ಪ್ರೀತಿ, ಶಾಂತಿ, ಆರೋಗ್ಯ, ಮಳೆ, ಬೆಳೆ, ಸೌಖ್ಯ, ಸಮೃದ್ಧಿಯನ್ನು ಆ ತಾಯಿ ನೀಡಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.
ಎಲ್ಲರೂ ಕೂಡ ಪ್ರೀತಿ, ವಿಶ್ವಾಸದಿಂದ ಬದುಕುವಂತಾಗಲಿ. ಎಲ್ಲರಿಗೂ ಆರೋಗ್ಯವನ್ನು ಕೊಡು ಎಂದು ಆ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಎಲ್ಲಾ ಜನರೂ ಒಳ್ಳೆಯ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಮಾಡುವಂತಾಗಬೇಕು. ದೇವರು ಇರವುದಕ್ಕೆ ಇದೆಲ್ಲ ಜೀವಂತ ಉಳಿದಿದೆ. ಮಳೆ, ಬೆಳೆ ಆಗುತ್ತಿದೆ, ಜನರ ಕಷ್ಟಗಳನ್ನು ಪರಿಹಾರ ಮಾಡಲಿ. ಸುಖ, ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಆ ತಾಯಿಯಲ್ಲಿ ಮನವಿ ಮಾಡಿದ್ದೇನೆ ಎಂದು ಅವರುತಿಳಿಸಿದರು.