ಬೆಂಗಳೂರು,ಅ.29- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ನಮ ಪಕ್ಷ ಹಾಗೂ ನನ್ನ ಮೇಲೆ ಹಲವು ಆಪಾದನೆಗಳನ್ನು ಮಾಡಿದ್ದು, ನ.23 ರ ನಂತರ ಉತ್ತರ ಕೊಡುವುದಾಗಿ ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಗಳ ಪೈಕಿ ಚನ್ನಪಟ್ಟಣ ಹೆಚ್ಚು ಗಮನ ಸೆಳೆದಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಪದ ಪ್ರಯೋಗಗಳನ್ನು ನೋಟ್ ಮಾಡಿಕೊಂಡಿದ್ದೇನೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯದ ಬಗ್ಗೆ ನಮ್ಮ ಸಮುದಾಯದ ಬಗ್ಗೆಯೂ ಮಾತನಾಡಿದ್ದಾರೆ. ಅವರ ಬೆಳವಣಿಗೆಗೆ ನಮಿಂದ ತೊಂದರೆಯಾಗಿರುವುದಾಗಿ ಪ್ರಸ್ತಾಪಿಸಿದ್ದಾರೆ. ನಾವೆಲ್ಲಾ ಒಕ್ಕಲಿಗರ ತರಹ ಕಾಣುವುದಿಲ್ಲವೇ? ಎಂಬುದೂ ಸೇರಿದಂತೆ ಹಲವು ರೀತಿ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ವರದಿಯನ್ನೇಕೆ ಬಿಡುಗಡೆ ಮಾಡಿಲ್ಲ :
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಏಕೆ ಬಿಡುಗಡೆ ಮಾಡಿಲ್ಲ. ಗಂಧದ ಕಡ್ಡಿ ಹಚ್ಚಿ ಬೆಳಗುತ್ತಿದ್ದಾರೆಯೇ?, ವರದಿ ಬಗ್ಗೆ ಭಜನೆ ಮಾಡುತ್ತಿದ್ದಾರಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವರದಿ ಇಟ್ಟುಕೊಂಡು ಏನೋ ಗುಮ ಇದೆ ಎಂದು ತೋರಿಸಬೇಕಿಲ್ಲ. ನನ್ನ ಮೇಲೆ ವರದಿ ಸ್ವೀಕರಿಸಲಿಲ್ಲ ಎಂದು ಆಪಾದನೆ ಮಾಡಿದ್ದರು. ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಉಪಸಮಿತಿ ಮಾಡುತ್ತೇವೆ ಎಂಬ ಸಬೂಬು ಹೇಳಿಕೊಂಡು ಎಷ್ಟು ದಿನ ದೂಡುತ್ತೀರಿ?, ಉಪಚುನಾವಣೆ ಘೋಷಣೆಯಾಗಿರುವುದು ಈಗ, ಲೋಕಸಭೆ ಚುನಾವಣೆಗೂ ಮುನ್ನವೇ ವರದಿ ಸ್ವೀಕರಿಸಲಾಗಿತ್ತಲ್ಲವೇ?, ಇವು ಗಂಭೀರ ವಿಚಾರವಾಗಿದ್ದು, ಮುಂದೆ ಚರ್ಚೆ ಮಾಡುವುದಾಗಿ ಹೇಳಿದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯಸರ್ಕಾರದ ಯಾವುದೇ ರೀತಿಯ ಜನರ ಸಮಸ್ಯೆಗಳನ್ನು ಪರಿಹರಿಸಿಲ್ಲ. ವಿವಿಧ ಸಮುದಾಯಗಳ ಬೇಡಿಕೆಗೂ ಸ್ಪಂದಿಸುತ್ತಿಲ್ಲ. ಹಿಂದಿನ ಸರ್ಕಾರ ಮಾಡಿದ್ದ ಹಲವು ನಿರ್ಧಾರಗಳು ಅಲ್ಲಿಗೇ ನಿಂತಿವೆ ಎಂದರು.
ವಕ್ಫ್ ಆಸ್ತಿ ಬಗ್ಗೆ ಪರಿಶೀಲನೆ :
ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ವಕ್ಫ್ ಆಸ್ತಿಗಳ ಬಗ್ಗೆ ಪರಿಶೀಲನೆಯಾಗಬೇಕೆಂದು ತೀರ್ಮಾನವಾಗಿದೆ. ಆದರೆ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವಿಜಯಪುರ, ಧಾರವಾಡದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಗಮನಿಸಿದ್ದೇನೆ. ರೈತರ ಭೂಮಿಯನ್ನಾಗಲಿ, ಸರ್ಕಾರದ ಭೂಮಿಯನ್ನಾಗಲಿ ವಕ್ಫ್ ಹೆಸರಿನಲ್ಲಿ ಭೂಗಳ್ಳರು ಲಪಟಾಯಿಸುತ್ತಿದ್ದಾರೆ. ಅದು ಬೆಳಕಿಗೆ ಬರಬೇಕಾಗಿದೆ. ಓಲೈಕೆ ಮಾಡಿ, ಲೂಟಿ ಮಾಡಿದವರಿಗೆ ಬೆಂಬಲ ನೀಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದರು. ಮುಡಾ ಹಗರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಅಂತಿಮ ವರದಿ ಏನು ಬರುತ್ತದೋ ಎಂಬುದನ್ನು ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
51 ಸಾವಿರ ಉದ್ಯೋಗ :
ಇದಕ್ಕೂ ಮುನ್ನ ಭಾರತೀಯ ಅಂಚೆ ಇಲಾಖೆ ನಗರದಲ್ಲಿಂದು ಹಮ್ಮಿ ಕೊಂಡಿದ್ದ ಉದ್ಯೋಗಮೇಳದಲ್ಲಿ ಆಯ್ಕೆಯಾಗಿರುವ 25 ಯುವ ಜನರಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಗತಿ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ರೋಜಗಾರ್ ಯೋಜನೆಯಲ್ಲಿ 2 ಹಂತದಲ್ಲಿ 51 ಸಾವಿರ ಉದ್ಯೋಗ ನೀಡಲಾಗಿದೆ. ಅಂಚೆ ಇಲಾಖೆಯಿಂದ 21 ಸಾವಿರ ಹುದ್ದೆಯನ್ನು ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ಧಿಗೆ ಆರ್ಥಿಕ ಸ್ಥಿತಿ ತುಂಬಲಾಗಿದೆ. ಯುವಕ, ಯುವತಿಯರಿಗೆ ಉದ್ಯೋಗ ಒದಗಿಸುವ ಬಹುದೊಡ್ಡ ಕಾರ್ಯಕ್ರಮವದು. ಕರ್ಮಯೋಗಿ ವೃತ್ತಿ ಎಂಬ ಹೆಸರಿನಲ್ಲಿ ಪ್ರಧಾನಿಯವರು ಕೊಟ್ಟಿದ್ದಾರೆ. ಆರ್ಥಿಕ ಬೆಳವಣಿಗೆಯಲ್ಲಿ 5ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಂದಿದ್ದೇವೆ. ಮಹಿಳೆಯರಿಗೂ ಹಲವು ಅಭಿವೃದ್ಧಿ ರೂಪಿಸುತ್ತಿದ್ದು, ನಾವೆಲ್ಲಾ ಕೈಜೋಡಿಸಿ ಕೆಲಸ ಮಾಡಬೇಕಿದೆ ಎಂದರು.