ಬೆಂಗಳೂರು,ಅ.29- ನಗರದ ಮಹದೇವಪುರ ಹಾಗೂ ಕೊಡಿಗೇಹಳ್ಳಿ ಠಾಣೆ ಪೊಲೀಸರು ಮೂವರು ದ್ವಿಚಕ್ರ ವಾಹನಕಳ್ಳರನ್ನು ಬಂಧಿಸಿ ಒಟ್ಟು 12 ಲಕ್ಷ ರೂ. ಬೆಲೆಬಾಳುವ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಪುರ :
ಎಚ್‌ಪಿ ಕಂಪನಿಯ ಉದ್ಯೋಗಿಯೊಬ್ಬರು ಕಂಪನಿಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಕಚೇರಿಗೆ ಹೋಗಿದ್ದು, ವಾಪಸ್ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಕಳವು ಆಗಿದ್ದ ಬಗ್ಗೆ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ದ್ವಿಚಕ್ರ ವಾಹನ ಸಮೇತ ಬಂಧಿಸಿದ್ದಾರೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ನಗರದ ಹಲವು ಕಡೆಗಳಲ್ಲಿ ದ್ವಿಚಕ್ರ ವಾಹನವನ್ನು ಕಳವು ಮಾಡಿ ರೈಲ್ವೆ ನಿಲ್ದಾಣದ ಡೀಸಲ್ ಶೆಡ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆ ಸ್ಥಳಕ್ಕೆ ತೆರಳಿ 7 ದ್ವಿಚಕ್ರ ವಾಹನವನ್ನು ಹಾಗೂ ರೈಲ್ವೆ ಪಾರ್ಕಿಂಗ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 8 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಒಟ್ಟಾರೆ ಆರೋಪಿಯ ಬಂಧನದಿಂದ ಮಹದೇವಪುರ 4, ವೈಟ್‌ಫೀಲ್‌್ಡ, ಮೈಕ್ರೋಲೇಔಟ್, ಬಯ್ಯಪ್ಪನಹಳ್ಳಿ, ಸೂರ್ಯಸಿಟಿ, ತಮಿಳುನಾಡಿನ ತಿರುವಣ್ಣಾಮಲೈ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 9 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 2 ದ್ವಿಚಕ್ರ ವಾಹನಗಳ ಮಾಲಿಕರ ಪತ್ತೆ ಕಾರ್ಯ ಮುಂದುವರೆದಿದೆ.
ಇನ್‌್ಸಪೆಕ್ಟರ್ ಪ್ರವೀಣ್ ಬಾಬು ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಕೊಡಿಗೇಹಳ್ಳಿ :
ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿ 3.92 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಯಿಬಾಬಾ ದೇವಸ್ಥಾನದ ಮುಂಭಾಗ ಪೂಜಾ ಸ್ಟೋರ್ ಪಕ್ಕದಲ್ಲಿರುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಯೊಬ್ಬರು ತಮ ದ್ವಿಚಕ್ರ ವಾಹನ ನಿಲ್ಲಿಸಿ ಕೀಯನ್ನು ವಾಹನದಲ್ಲೇ ಬಿಟ್ಟು ಅಂಗಡಿಗೆ ಹೋಗಿ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಬಗ್ಗೆ ಅವರು ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಖಚಿತ ಮಾಹಿತಿ ಕಲೆ ಹಾಕಿ ಹೆಬ್ಬಾಳ ಜಂಕ್ಷನ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದ್ವಿಚಕ್ರ ವಾಹನ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆ ಮಾಡಿದಾಗ ಆರೋಪಿಗಳು ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಇಂಪ್ಯಾಕ್ಟ್ ಕಾಲೇಜಿನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆ ಸ್ಥಳಕ್ಕೆ ತೆರಳಿ 6 ದ್ವಿಚಕ್ರ ವಾಹನಗಳನ್ನು ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ 4, ಅನ್ನಪೂರ್ಣೇಶ್ವರಿ ನಗರ ಹಾಗೂ ಕೋರಮಂಗಲ ಪೊಲೀಸ್ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಇನ್ಸ್ ಪೆಕ್ಟರ್ ಮಹೇಶ್ ಹಾಗೂ ಸಿಬ್ಬಂದಿ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.