Saturday, November 23, 2024
Homeಬೆಂಗಳೂರು"ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಸುರಕ್ಷತಾ ಕ್ರಮ ಅನುಸರಿಸಿ"

“ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಸುರಕ್ಷತಾ ಕ್ರಮ ಅನುಸರಿಸಿ”

Have an eco-friendly Diwali and follow safety measures

ಬೆಂಗಳೂರು,ಅ.29- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಬಹಳ ಜಾಗರೂಕತೆಯಿಂದ, ಎಚ್ಚರಿಕೆಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಮಹತ್ವದ ಸಲಹೆಸೂಚನೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ.

ಪ್ರಮುಖವಾಗಿ ಹಸಿರು ಪಟಾಕಿಗಳನ್ನು ಖರೀದಿಸಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.ಮಕ್ಕಳು ಪಟಾಕಿ ಹಚ್ಚುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಹಚ್ಚಬಾರದು. ಪ್ರಮುಖವಾಗಿ ಪಟಾಕಿಗಳನ್ನು ಖರೀದಿಸುವಾಗ ಅವುಗಳ ಕ್ಯೂಆರ್‌ ಕೋಡ್‌ಗಳನ್ನು ಪರಿಶೀಲಿಸುವ ಜೊತೆಗೆ ಅಧಿಕೃತ ಅಂಗಡಿಗಳಿಂದ ಮಾತ್ರ ಖರೀದಿಸಲು ಸಲಹೆ ನೀಡಿದ್ದಾರೆ.

ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಅಂಗಡಿ- ಮಳಿಗೆಗಳಿಂದ ಖರೀದಿಸಿ ಹಾಗೂ ಪಟಾಕಿ ಮಾರಾಟಕ್ಕೆ ಅವರುಗಳು ಲೈಸೆನ್‌ಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಿರುವುದನ್ನು ಖಚಿತಪಡಿಸಿಕೊಂಡು ಪಟಾಕಿಗಳನ್ನು ಖರೀದಿಸಬೇಕೆಂದು ಅವರು ಸೂಚಿಸಿದ್ದಾರೆ. ದೀಪಾವಳಿ ಆಚರಣೆ ಸಂದರ್ಭದಲ್ಲಿ ಅತಿಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಖರೀದಿ ಮಾಡಬೇಡಿ. ಅನಧಿಕೃತವಾಗಿ ಕೆಲವೊಂದು ಅಂಗಡಿಗಳಲ್ಲಿ ಪಟಾಕಿಗಳನ್ನು ಮಾರಲಾಗುತ್ತಿರುತ್ತವೆ. ಅಂತಹ ಅಂಗಡಿಗಳಿಂದ ಪಟಾಕಿಗಳನ್ನು ಖರೀದಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಹಳೆಯ ಹಾಗೂ ಹಾಳಾದ ಪಟಾಕಿಗಳನ್ನು ಕೊಂಡುಕೊಳ್ಳ ಬಾರದು ಮತ್ತು ಅವುಗಳನ್ನು ಬಳಸದಂತೆ ಅಂಗಡಿಗಳವರು ಸಹ ಸೂಕ್ತ ತಿಳುವಳಿಕೆ ನೀಡಬೇಕು. ಪಟಾಕಿಗಳನ್ನು ಮಕ್ಕಳು ಹಚ್ಚುವಾಗ ಪೋಷಕರು ಸಹ ಜೊತೆಯಲ್ಲಿದ್ದು ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನಹರಿಸಬೇಕು. ಚಿಕ್ಕಮಕ್ಕಳು ಹೆಚ್ಚು ಅಪಾಯಕಾರಿ ಯಾದ ಪಟಾಕಿಗಳನ್ನು ಹಚ್ಚದಂತೆ ನೋಡಿಕೊಳ್ಳಬೇಕು. ಪಟಾಕಿ ಸಿಡಿಸುವುದನ್ನು ದೂರದಲ್ಲಿ ನಿಂತು ನೋಡುವ ವ್ಯವಸ್ಥೆ ಮಾಡಬೇಕು. ಚಿಕ್ಕಮಕ್ಕಳು ಪಟಾಕಿ ಹಚ್ಚುವಾಗ ಉದ್ದನೆಯ ಊದುಬತ್ತಿಗಳನ್ನು ಬಳಸುವಂತೆ ಸೂಚನೆ ನೀಡುವುದು ಮತ್ತು ಮಕ್ಕಳ ಮೇಲೆ ಪೋಷಕರು ನಿಗಾ ವಹಿಸಬೇಕು.

ಜನನಿಬಿಡ ಪ್ರದೇಶಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಹಾಗೂ ವಾಹನಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಪಟಾಕಿಗಳನ್ನು ತೆರೆದ ಮೈದಾನದಲ್ಲಿ , ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು, ಪಟಾಕಿಗಳನ್ನು ಹಚ್ಚುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಸಿಡಿಸದಿರಿ:
ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಅನಿಲ್‌ ಕೇಂದ್ರಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮ, ಶಿಶುಪಾಲನ ಕೇಂದ್ರಗಳ ಸುತ್ತಮುತ್ತ ಪಟಾಕಿಗಳನ್ನು ಸಿಡಿಸದಂತೆ ನೋಡಿ ಕೊಳ್ಳಬೇಕು.ಅಲ್ಲದೆ ಪಟಾಕಿ ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗ ದಂತೆ ಮುಂಜಾಗ್ರತಾ ಕ್ರಮವನ್ನು ವಹಿಸಬೇಕು. 2 ಗಂಟೆ ಮಾತ್ರ ಅವಕಾಶ: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯದಲ್ಲಿ ಅಂದರೆ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಪಟಾಕಿಗಳನ್ನು ಸಿಡಿಸುವಂತೆ ಆಯುಕ್ತರು ತಿಳಿಸಿದರು.

ಸುರಕ್ಷತಾ ಕ್ರಮ: ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್‌‍ ಧರಿಸುವುದು, ಕಣ್ಣುಗಳಿಗೆ ಸುರಕ್ಷಿತಾ ಕನ್ನಡಕಗಳನ್ನು ಧರಿಸುವುದು ಹಾಗೂ ಬೆಂಕಿ ನಂದಿಸಲು ನೀರು, ಮರಳು, ಬೆಂಕಿ ನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವ ಮೂಲಕ ಸುರಕ್ಷತಾ ಕ್ರಮ ಅನುಸರಿಸಬೇಕು. ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮೆ ಪರೀಕ್ಷಿಸಬೇಡಿ. ಪಟಾಕಿ ಹಚ್ಚುವಾಗ ಹತ್ತಿಯ ಬಟ್ಟೆಯನ್ನೇ ಧರಿಸಬೇಕು, ಕೈಯಲ್ಲಿ ಪಟಾಕಿ ಹಿಡಿದು ಹಚ್ಚುವುದು ಅಪಾಯಕಾರಿ. ದೇಹದ ಸೂಕ್ಷ್ಮ ಅಂಗಾಂಗಗಳ ಮೇಲೆ ಗಮನವಿರಲಿ. ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಬಳಿ ಇಟ್ಟುಕೊಳ್ಳಿ.

112 ಸಂಪರ್ಕಿಸಿ: ಪ್ರಮುಖವಾಗಿ ಸಿಡಿಯದ, ಟುಸ್ಸ್‌ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಅಪಾಯಕಾರಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದಾದರೂ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ 112 ಹಾಗೂ 108ಕ್ಕೆ ಸಂಪರ್ಕಿಸುವುದು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕೆಂದು ದಯಾನಂದ ಅವರು ತಿಳಿಸಿದ್ದಾರೆ.

RELATED ARTICLES

Latest News