ಬೆಂಗಳೂರು,ಅ.29- ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮಾಡಿದರೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಆನ್‌ಲೈನ್‌ನಲ್ಲಿ ಪಟಾಕಿ ಮಾರುವುದು ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಟಾಸ್ಕ್‌ಪೋರ್ಸ್ ರಚನೆ:
ತಾತ್ಕಾಲಿಕ ಪಟಾಕಿ ಮಾರಾಟ ಮತ್ತು ಬಳಕೆಯ ನಿಯಂತ್ರಿಸುವ ಸಂಬಂಧಪಟ್ಟಂತೆ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ. ಇದರಲ್ಲಿ ಬಿಬಿಎಂಪಿ, ಅಗ್ನಿಶಾಮಕ ವಿದ್ಯುತ್ ಇಲಾಖೆಗಳ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಪ್ರತಿನಿಧಿಗಳು ಇರುತ್ತಾರೆ. ಸುರಕ್ಷತಾ ಕ್ರಮಗಳಿಗಾಗಿ ಈ ಟಾಸ್ಕ್‌ಫೋರ್ಸ್ ಅನ್ನು ರಚಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಮಾರಾಟಗಾರರ ಸಮುಖದಲ್ಲಿ ಲಾಟರಿ ಎತ್ತುವ ಮೂಲಕ 315 ಅರ್ಜಿಗಳಿಗೆ ತಾತ್ಕಾಲಿಕ ಪಟಾಕಿ ಪರವಾನಗೆಗಳನ್ನು ನೀಡಲಾಗಿದ್ದು, ನಗರಾದ್ಯಂತ 75 ಕಡೆ 315 ಅಂಗಡಿ ಮಳಿಗೆಗಳನ್ನು ತೆರೆಯಲಾಗಿದೆ, ಪಟಾಕಿ ವ್ಯಾಪಾರಿಗಳಿಗೆ ಸುರಕ್ಷತಾ ಕ್ರಮಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಪಟಾಕಿಯಿಂದ ಅವಘಡಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿವಹಿಸುವ ಮೂಲಕ ಪರಿಸರ ಸ್ನೇಹಿ ಪಟಾಕಿ ಹಬ್ಬವನ್ನು ಆಚರಿಸುವಂತೆ ಆಯುಕ್ತರು ತಿಳಿಸಿದ್ದಾರೆ.