Thursday, November 14, 2024
Homeರಾಜಕೀಯ | Politicsರಾಜ್ಯ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ : ದೇವೇಗೌಡರ ಭವಿಷ್ಯ

ರಾಜ್ಯ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ : ದೇವೇಗೌಡರ ಭವಿಷ್ಯ

Congress government will not complete its term: Deve Gowda

ಬೆಂಗಳೂರು, ನ.10-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭವಿಷ್ಯ ನುಡಿದಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಕ್ಷೇತ್ರದ ಎಸ್.ಎಂ.ಹಳ್ಳಿಯಲ್ಲಿ ನಿನ್ನೆ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ.

ಕಾಂಗ್ರೆಸ್ನ ನಡತೆ ಮತ್ತು ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ ಅವರು, ಜನರನ್ನು ಈ ಸರ್ಕಾರ ಸುಲಿಗೆ ಮಾಡುತ್ತಿದೆ. ಎಲ್ಲಾ ರೀತಿಯಲ್ಲಿಯೂ ಜನತೆಯನ್ನು ಶೋಷಣೆ ಮಾಡುತ್ತಿದೆ. ಇಂಥ ಸರ್ಕಾರ ಇರಬಾರದು. ಇದ್ದರೆ ಜನರಿಗೆ ಒಳ್ಳೆಯದು ಆಗುವುದಿಲ್ಲ ಎಂದು ಗುಡುಗಿದ್ದಾರೆ.

ಮೇಕೆದಾಟು ಮಾಡಿಯೇ ತೀರುತ್ತೇವೆ : ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಸಾಧ್ಯವಿಲ್ಲ. ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹೋರಾಟ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಐ.ಎನ್.ಡಿ.ಐ.ಎ. ಮೈತ್ರಿಕೂಟವನ್ನು ಟೀಕಿಸಿದ ದೇವೇಗೌಡರು, ಅವರ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ಯಾವುದೇ ಒಬ್ಬ ನಾಯಕರು ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದೇ? ಎಂದು ಟಾಂಗ್ ನೀಡಿದ್ದಾರೆ.

ಮಾಡುವ ಕೆಲಸವನ್ನು ಅಚ್ಚುಕಟ್ಟಿನಿಂದ ಮಾಡಬೇಕು. ಜನರ ನಿರೀಕ್ಷೆ ತಲುಪುವಲ್ಲಿ ಗ್ಯಾರಂಟಿಗಳು ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸರ್ಕಾರದಿಂದ ಆಗುವುದಿಲ್ಲ. ಅಗ್ಗದ ಭರವಸೆಗಳನ್ನು ಕೊಟ್ಟು ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಬಲಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ನಾನು ಕಾಡುಗೊಲ್ಲ ಮತ್ತು ಬೆಸ್ತ ಸಮುದಾಯಗಳನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಖಚಿತ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಈ ಪ್ರವರ್ಗಕ್ಕೆ ಸೇರಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಲಪಡಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದ್ದಾರೆ.

1957ರಲ್ಲಿ ಚನ್ನಪಟ್ಟಣ ರಾಜಕೀಯದಲ್ಲಿ ತಮ್ಮ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡ ಅವರು, ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ನಾನು ಆಗ ವರದೇಗೌಡರನ್ನು ಸಂಪರ್ಕಿಸಿದ್ದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ದೇವೇಗೌಡ ಅವರನ್ನು ಬಡವರ ಬಂಧು ಮತ್ತು ರೈತ ಬಂಧು ಎಂದು ಶ್ಲಾಘಿಸಿದ್ದಾರೆ.

ಕರ್ನಾಟಕದಾದ್ಯಂತ ನಿರ್ಣಾಯಕ ಯೋಜನೆಗಳನ್ನು ಮುನ್ನಡೆಸುವಲ್ಲಿ ಗೌಡರ ಪಾತ್ರವನ್ನು ಅವರು ಕೊಂಡಾಡಿದ್ದಾರೆ. ಸ್ಥಳೀಯ ನೀರಾವರಿ ಯೋಜನೆ, ಅದರಲ್ಲಿಯೂ ಸತ್ತೇಗಾಲ ಯೋಜನೆಗೆ ಒತ್ತು ನೀಡಿದರು. ಈ ಪ್ರಯತ್ನದಲ್ಲಿ ಕುಮಾರಸ್ವಾಮಿ ಅವರ ದೂರದೃಷ್ಟಿಯನ್ನು ನಾವು ಸರಿಸಲೇಬೇಕು ಎಂದಿದ್ದಾರೆ.

RELATED ARTICLES

Latest News