ಬೆಂಗಳೂರು,ನ.19- ರಾಜ್ಯದಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಅಗತ್ಯವಾದ ತಂತ್ರ-ಮಂತ್ರಗಳನ್ನು ಪಕ್ಷ ಹೊಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಜನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕಾರ್ಯಕರ್ತರು ಆಶಾಭಾವನೆಯಿಂದಿರಿ. ಪಕ್ಷವನ್ನು ಉಳಿಸಿ, ಬೆಳೆಸೋಣ. ಮತ್ತಷ್ಟು ಹೊಸ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮಂತ್ರ ಇದೆ, ತಂತ್ರ ಇದೆ, ಶಕ್ತಿ ಇದೆ, ನಾಯಕತ್ವವೂ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೂ ಮತ್ತು ನೆಹರೂ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿರಾಗಾಂಧಿಯವರು ದೇಶದ ಅಭಿವೃದ್ಧಿಗಾಗಿ ರೂಪಿಸಿದ ಕಾರ್ಯಕ್ರಮಗಳು ಸದಾ ಸರಣೀಯ ಹಾಗೂ ಆಧರಣೀಯ ಎಂದರು.
ಇಂದಿರಾಗಾಂಧಿಯವರು ಉಕ್ಕಿನ ಮಹಿಳೆ ಎಂದು ಕರೆಸಿಕೊಂಡಿದ್ದರು. ಅವರ ದಿಟ್ಟ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ವಿಶ್ವವೇ ಗುರುತಿಸಿತ್ತು. ಗಾಂಧಿ ಕುಟುಂಬ ದೇಶದ ಸಮಗ್ರತೆಗಾಗಿ ಹಲವು ತ್ಯಾಗ, ಬಲಿದಾನಗಳನ್ನು ಮಾಡಿದೆ. ಇತ್ತೀಚೆಗೆ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ಮೂಲಕ ಆ ಪರಂಪರೆಯನ್ನು ಮುಂದುವರೆಸಿದರು ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕ್ರಮಗಳನ್ನು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬದಲಾವಣೆ ಮಾಡುವ ಶಕ್ತಿ ಹಾಗೂ ಧೈರ್ಯ ಹೊಂದಿಲ್ಲ. ವೃದ್ಧಾಪ್ಯ ವೇತನ ಸೇರಿದಂತೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಕೆ.ಎಚ್.ಮುನಿಯಪ್ಪ, ಮುಖಂಡರಾದ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್, ರಾಣಿ ಸತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನಾನಿಸಲಾಯಿತು.