ಬೆಂಗಳೂರು,ನ.12- ಕಳೆದ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ 9,092.02 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಇದು ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 6 ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹವಾದಂತಾಗಿದೆ.
ಆದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಕೆ ಮಾಡಿದರೆ ಈ ವರ್ಷದ ವಾಣಿಜ್ಯ ತೆರಿಗೆ ಸಂಗ್ರಹ ಕಡಿಮೆಯಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 9,129.05 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಸುಮಾರು 38 ಕೋಟಿ ರೂ.ಗಳಷ್ಟು ಈ ವರ್ಷ ವಾಣಿಜ್ಯ ತೆರಿಗೆ ಸಂಗ್ರಹ ಕಡಿಮೆಯಾಗಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ, ಇದುವರೆಗೂ ರಾಜ್ಯದಲ್ಲಿ 58,406.09 ಕೋಟಿ ರೂ.ನಷ್ಟು ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ 44,375.36 ಕೋಟಿ ರೂ. ಸರಕು ಸೇವಾ ತೆರಿಗೆ, 13,218.33 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 812.40 ಕೋಟಿ ರೂ. ವೃತ್ತಿ ತೆರಿಗೆ ಒಳಗೊಂಡಿದೆ.
ಅಕ್ಟೋಬರ್ ತಿಂಗಳಿನಲ್ಲಿ 7065.58 ಕೋಟಿ ರೂ. ಸರಕು ಸೇವಾ ತೆರಿಗೆ, 1941.02 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 85.42 ಕೋಟಿ ರೂ. ಸೇರಿದಂತೆ ಒಟ್ಟು 9092.02 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.