ಬೆಂಗಳೂರು, ನ.12-ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅಹದ್ಖಾನ್ ಅವರು ಅವಹೇಳನಕಾರಿ ಭಾಷೆ ಬಳಸಿ ಟೀಕಿಸಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್, ನಾಚಿಕೆಗೇಡಿನ ಹೇಳಿಕೆ ನೀಡಿರುವುದಕ್ಕೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಜೆಡಿಎಸ್, ಹೆಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವವನ್ನು ಬಣ್ಣ, ಜಾತಿ, ಪಂಥ ಅಥವಾ ಲಿಂಗದಿಂದ ವ್ಯಾಖ್ಯಾನಿಸಲಾಗುವುದಿಲ್ಲ. ಆದರೆ, ಉತ್ತಮ ಸಮಾಜ ಮತ್ತು ಎಲ್ಲಾ ಸಮುದಾಯಗಳ ಉನ್ನತಿಗಾಗಿ ಅವರು ಅಚಲವಾದ ದೃಷ್ಟಿಕೋನ ಹೊಂದಿದ್ದಾರೆಂದು ವ್ಯಾಖ್ಯಾನಿಸಲಾಗುತ್ತದೆ ಎಂದು ಹೇಳಿದೆ.
ಕ್ಷುಲ್ಲಕ ರಾಜಕೀಯಕ್ಕಾಗಿ ದ್ವೇಷವನ್ನು ಹರಡುವುದು ಜಮೀರ್ ಮತ್ತು ಕಾಂಗ್ರೆಸ್ ಹುನ್ನಾರವಾಗಿದೆ ಎಂದು ಜೆಡಿಎಸ್ ಟೀಕಿಸಿದ್ದು, ಕರ್ನಾಟಕವು ಒಗ್ಗೂಡಿಸುವಂತಹ ನಾಯಕರಿಗೆ ಅರ್ಹವಾಗಿದೆಯೇ ಹೊರತು ವಿಭಜನೆ ಮಾಡುವವರಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಜನಾಂಗೀಯ ದ್ವೇಷಿ ಎಂದು ಟೀಕಿಸಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷದ ನಾಯಕರ ಕೊಳಕು ಮನಸ್ಥಿತಿಯು ಜಮೀರ್ ಅವರ ಹೇಳಿಕೆ ಮೂಲಕ ಹೊರಬಂದಿದೆ ಎಂದಿದೆ.
ಜನ ಮೆಚ್ಚಿದ ರಾಜಕಾರಣಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವರ್ಣದ ಆಧಾರದ ಮೇಲೆ ನಿಂದಿಸಿ, ಕಾಂಗ್ರೆಸ್ ಪಕ್ಷ ಜನಾಂಗೀಯ ನಿಂದನೆ ಮತ್ತು ವಸಾಹತುಶಾಹಿ ನೀತಿಯನ್ನು ಮತ್ತೆ ಹುಟ್ಟುಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ನನ್ನ ಬಣ್ಣ ನನ್ನ ಹೆಮೆ, ಐಎನ್ಸಿ ಕರ್ನಾಟಕ, ಐನ್ಸಿ ಇಂಡಿಯಾ, ದ್ವೇಷಕ್ಕಾಗಿ ಕ್ಷಮೆ ಯಾಚಿಸಿ,ಜನಾಂಗೀಯ ಕಾಂಗ್ರೆಸ್ ಬಹಿರಂಗ,ವಿಭಜನಾ ರಾಜಕಾರಣವನ್ನು ನಿಲ್ಲಿಸಿ, ನಮ ನಾಯಕರನ್ನು ಗೌರವಿಸಿ ಎಂದು ಹ್ಯಾಶ್ ಟ್ಯಾಗ್ ಮಾಡಿ ಪೋಸ್ಟ್ ಮಾಡಿದೆ.