ವಯನಾಡು,ನ. 13: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಈ ಕ್ಷೇತ್ರದ ಜನರು ತಮನ್ನು ಪ್ರತಿನಿಧಿಸಲು ಮತ್ತು ಅವರು ತೋರಿಸಿದ ಪ್ರೀತಿಗೆ ಪ್ರತಿಫಲ ನೀಡಲು ಅವಕಾಶ ನೀಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಲೋಕಸಭಾ ಉಪಚುನಾವಣೆ ನಡೆಯುತ್ತಿರುವ ವಯನಾಡ್ ನ ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಿಯಾಂಕಾ ಈ ಹೇಳಿಕೆ ನೀಡಿದ್ದಾರೆ.
ವಯನಾಡಿನ ಜನರು ನನಗೆ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ಮರುಪಾವತಿಸಲು ಮತ್ತು ಅವರಿಗಾಗಿ ಕೆಲಸ ಮಾಡಲು ಮತ್ತು ಅವರ ಪ್ರತಿನಿಧಿಯಾಗಲು ನನಗೆ ಅವಕಾಶ ನೀಡುತ್ತಾರೆ ಎಂಬುದು ನನ್ನ ನಿರೀಕ್ಷೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇರಳದಲ್ಲಿ ರಾಜಕೀಯ ಬಿರುಗಾಳಿಯನ್ನು ಸಷ್ಟಿಸಿರುವ ವಕ್ಫ್ ಕಾನೂನು ವಿಷಯ ಮತ್ತು ವಯನಾಡಿನ ಭೂಕುಸಿತ ಪೀಡಿತ ಜನರಿಗೆ ಕೇಂದ್ರದ ಸಹಾಯದ ಕೊರತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಿಯಾಂಕಾ, ಈ ವಿವಾದಗಳ ಬಗ್ಗೆ ಮಾತನಾಡುವ ದಿನ ಇಂದು ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.
ಇಂದು ಮತದಾನದ ದಿನ. ಪ್ರತಿಯೊಬ್ಬರೂ ತಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸುತ್ತಾರೆ ಮತ್ತು ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.