Thursday, November 14, 2024
Homeರಾಜ್ಯಉಪಚುನಾವಣೆ : ರಾಜ್ಯದ 3 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

ಉಪಚುನಾವಣೆ : ರಾಜ್ಯದ 3 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

By-elections: Peaceful voting in three constituencies

ಬೆಂಗಳೂರು,ನ.13- ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು ಬೆಳಗ್ಗೆಯಿಂದ ಆರಂಭವಾಗಿದ್ದು, ಬಹುತೇಕ ಶಾಂತಿಯುತವಾಗಿ ನಡೆದಿದೆ.
ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳ ಬಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಮೂರು ಕ್ಷೇತ್ರಗಳಲ್ಲೂ ಬಹುತೇಕ ಸಾಮಾನ್ಯವಾಗಿ ಕಂಡುಬಂದಿತು. ಬೆಳಗ್ಗೆಯಿಂದಲೇ ಮತದಾನ ಬಿರುಸುಗೊಂಡಿತ್ತು.

ಮತ ಗಟ್ಟೆಗಳಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ಒದಗಿಸಲಾಗಿತ್ತು. ಮೂರು ವಿಧಾನಸಭಾ ಕ್ಷೇತ್ರಗಳ ಒಟ್ಟು 45 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ಮತದಾನ ಮಾಡುವ ಮೂಲಕ ನಿರ್ಧಾರ ಮಾಡಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು ಫಲಿತಾಂಶಕ್ಕಾಗಿ ನ.23ರವರೆಗೆ ಕಾಯಬೇಕಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ, ಬಸವರಾಜ ಬೊಮಾಯಿ ಅವರ ಪುತ್ರ ಭರತ್‌ ಬೊಮಾಯಿ, ಸಂಸದ ಇ.ತುಕರಾಂ ಅವರ ಪತ್ನಿ ಇ.ಅನ್ನಪೂರ್ಣ ಹಾಗೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ರಾಜಕೀಯ ಭವಿಷ್ಯ ಈ ಉಪಚುನಾವಣೆಯಲ್ಲಿ ಅಡಗಿದೆ.

ರಾಜ್ಯದ ಮಿನಿ ಮಹಾಸಮರ ಎಂದೇ ಪರಿಗಣಿಸಲಾಗಿದ್ದ ಈ ವಿಧಾನಸಭೆಯ ಉಪಚುನಾವಣೆ ಪ್ರತಿಪಕ್ಷಗಳಾದ ಜೆಡಿಎಸ್‌‍ ಮತ್ತು ಬಿಜೆಪಿಯ ಪ್ರತಿಷ್ಠೆಯ ಕಣವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌‍ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಅತಿಹೆಚ್ಚು 31 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ 1,12,324 ಪುರುಷ, 1,20,617 ಮಹಿಳಾ ಹಾಗೂ 8 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,32,949 ಮತದಾರರು ಮತದಾನದ ಹಕ್ಕು ಪಡೆದಿದ್ದರು.

ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್‌ ಬೊಮಾಯಿ, ಕಾಂಗ್ರೆಸ್‌‍ ಅಭ್ಯರ್ಥಿ ಪಠಾಣ ಯಾಸೀರ್‌ ಅಹಮದ್‌ ಖಾನ್‌ ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಸ್ಫರ್ಧಿಸಿದ್ದಾರೆ.ಈ ಕ್ಷೇತ್ರದಲ್ಲಿ 1,21,443 ಪುರುಷ, 1,16,076 ಮಹಿಳಾ ಹಾಗೂ 6 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,37,525 ಮತದಾರರು ಇದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಬಂಗಾರು ಹನುಮಂತ ಹಾಗೂ ಕಾಂಗ್ರೆಸ್‌‍ ಅಭ್ಯರ್ಥಿ ಇ.ಅನ್ನಪೂರ್ಣ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 1,17,885 ಪುರುಷ , 1,18,435 ಮಹಿಳಾ, 29 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,36,349 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ 5 ಸಖಿ ಮತಗಟ್ಟೆಗಳನ್ನು ಒಂದು ಯುವ ಮತಗಟ್ಟೆ, 1 ದಿವ್ಯಾಂಗರು ನಿರ್ವಹಿಸುವ ಮತದಾನ ಕೇಂದ್ರ, 1 ವಿಷಯಾಧರಿತ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿತ್ತು.

ಚನ್ನಪಟ್ಟಣ ಕ್ಷೇತ್ರದಲ್ಲಿ 208, ಶಿಗ್ಗಾವಿಯಲ್ಲಿ 196 ಹಾಗೂ ಸಂಡೂರಿನಲ್ಲಿ 153 ಮತಗಟ್ಟೆಗಳ್ನು ತೆರೆಯಲಾಗಿತ್ತು. ಚನ್ನಪಟ್ಟಣದ 276, ಶಿಗ್ಗಾವಿಯ 121 ಹಾಗೂ ಸಂಡೂರಿನ 127 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ಮಾಡಲಾಗಿತ್ತು. ಮತದಾನ ಮಾಡಿದವರಿಗೆ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುತ್ತಿದೆ. ಈ ಉಪಚುನಾವಣೆಯಲ್ಲಿ ಮಹಿಳೆಯರು ಹಾಗೂ ಯುವ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮತದಾನಕ್ಕೆ ಆಗಮಿಸಿದ ವಯೋವೃದ್ಧರಿಗೆ ಮತದಾನದ ಸಿಬ್ಬಂದಿ ವೀಲ್‌ಚೇರ್‌ ನೀಡಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟರು. ಚನ್ನಪಟ್ಟಣ ಚಕ್ಕೆರೆ ಮತಗಟ್ಟೆಯಲ್ಲಿ 85 ವರ್ಷದ ಗೌರಮ ಎಂಬ ವೃದ್ಧೆ ವೀಲ್‌ಚೇರ್‌ನಲ್ಲಿ ಆಗಮಿಸಿ ಮತದಾನ ಮಾಡಿದರು. ದೊಡ್ಡಮಳೂರು ಗ್ರಾಮದ ಮತಟ್ಟೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುತ್ತಿದ್ದ ದೃಶ್ಯ ಬೆಳಗ್ಗೆ ಕಂಡುಬಂದಿತು.

ಶಿಗ್ಗಾವಿಯ ಮತಗಟ್ಟೆ 99ರಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದ ದೃಶ್ಯ ಕಂಡುಬಂತು. ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಇಂದು ಮೂರು ಕ್ಷೇತ್ರಗಳಲ್ಲೂ ರಜೆ ನೀಡಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ ಮತದಾನ ಬಿರುಸಾಗಿದ್ದರೆ ನಗರ ಪ್ರದೇಶಗಳಲ್ಲಿ ಸ್ವಲ್ಪ ಮತದಾನ ಮಂಕಾದಂತೆ ಕಂಡುಬಂದಿತು.

ಮತ ಎಣಿಕೆ ಕೇಂದ್ರ:
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ, ರಾಮನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ , ಶಿಗ್ಗಾವಿ ಕ್ಷೇತ್ರದ ಮತ ಎಣಿಕೆ ಹಾವೇರಿ ಜಿಲ್ಲೆ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ, ಸಂಡೂರು ಕ್ಷೇತ್ರದ ಮತ ಎಣಿಕೆಯು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ನ.23ರಂದು ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಮತದಾನ ಮುಕ್ತಾಯವಾದ ನಂತರ ಮತ ಯಂತ್ರಗಳನ್ನು ಈ ಮತ ಎಣಿಕೆ ಕೇಂದ್ರಗಳಲ್ಲಿನ ಎಲ್ಲಾ ಸ್ಟ್ರಾಂಗ್‌ ರೂಮ್‌ನಲ್ಲಿ ದಾಸ್ತಾನು ಮಾಡಿ ಬಿಗಿ ಭದ್ರತೆ ಒದಗಿಸಲಾಗುತ್ತದೆ.

RELATED ARTICLES

Latest News