ಬೆಂಗಳೂರು,ನ.21- ಅನ್ನಭಾಗ್ಯ ಎಂದು ಹೇಳಿ ಜನರ ಅನ್ನ ಕಸಿದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಲಮ್ ನಲ್ಲಿ ವಾಸಿಸಲು ಆಗದ ಜಾಗದಲ್ಲಿ ಏಳು ವಾಸವಾಗಿದ್ದಾರೆ. ಅಂತವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅವರು ತೆರಿಗೆ ಕಟ್ಟುವವರು ಅಂತ ಹೇಳುತ್ತಾರೆ. ಅವರೆಲ್ಲ ತೆರಿಗೆ ಕಟ್ಟುತ್ತಾರಾ ಎಂದು ಪ್ರಶ್ನಿಸಿದರು.
ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ. ಔಷದಿ , ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತವಾಗುತ್ತವೆ. ಜನರ ಕಷ್ಟ ಅವರಿಗೆ ಅರ್ಥ ಆಗುತ್ತಿಲ್ಲ. ಮುಡಾ ಅಂತ ಹೇಳಿ ಸೈಟ್ ವಾಪಸ್ ನೀಡಿದ್ದರು. ಈಗ ಬಿಪಿಎಲ್ ಕಾರ್ಡ್ ಪಡೆಯಲು ಮತ್ತೆ ಅರ್ಜಿ ಹಾಕಬೇಕಂತೆ ಇದೇನು ಮುಖ್ಯಮಂತ್ರಿಗಳೆ? ಇದು ಅತ್ಯಂತ ಜನ ವಿರೋಧಿ ಸರ್ಕಾರ. ಇದು ಯುಟರ್ನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸಿದ ಮೇಲೆ ಈಗ ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡುತ್ತಾರೆ. ರೇಷನ್ ಕಾರ್ಡ್ ರದ್ದಾದವರು ಅರ್ಜಿ ಹಾಕಿದರೆ ತಕ್ಷಣ ವಾಪಸ್ ಕೊಡಲಾಗುವುದು ಎಂದು ಹೇಳುತ್ತಾರೆ. ಅರ್ಜಿ ಹಾಕಿದ ಮೇಲೆ ಕಾರ್ಡ್ ಬರುವುದು ಯಾವಾಗ? ಅಲ್ಲಿಯ. ತನಕ ಕಾರ್ಡ್ ರದ್ದಾಗಿರುವ ಬಡವರು ಏನು ತಿನ್ನಬೇಕು ಎಂದು ಪ್ರಶ್ನಿಸಿದರು.
ಈ ಸರ್ಕಾರ ಹೀಗೆ ಮಾಡಿದರೆ ಹೆಚ್ಚು ದಿನ ಇರುವುದಿಲ್ಲ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಅನ್ನ ಕೊಡುತ್ತಿದೆ. ಬೇರೆ ರಾಜ್ಯದಲ್ಲಿ ಎಲ್ಲಿ ರೇಷನ್ ಕಾರ್ಡ್ ರದ್ದಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ರದ್ದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಟ್ಟರು. ರಾಜ್ಯ ಸರ್ಕಾರ ಹತ್ತು ಕೆಜಿ ಕೊಡುತ್ತೇವೆ ಎಂದು ಹೇಳಿದರು. ಅದರ ಬದಲು ಹಣ ಕೊಡುತ್ತೇವೆ ಎಂದರು, ಇವರಿಗೆ ಅಕ್ಕಿಗೆ ಹಣ ಕೊಡಲು ದುಡ್ಡಿಲ್ಲ. ಅದನ್ನು ಮರೆ ಮಾಚಲು ಕಣ್ಣೊರಿಸುವ ತಂತ್ರ ಅನುಸರಿಸುತ್ತಿದ್ದಾರೆ. ಇವರು ಪಾಪದ ಕೃತ್ಯ ಮಾಡಿದ್ದಾರೆ ಎಂದು ಹೇಳಿದರು.