ಮೈಸೂರು,ನ.13- ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಹಗರಣ ಮಾಡಿದ್ದೇವೆ ಎಂದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ಆರೋಪ ಸಾಬೀತುಪಡಿಸಲಾಗದಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಕೀಯ ನಿವೃತ್ತರಾಗಿ ತಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿರುವುದು ಬಿಜೆಪಿಯವರಿಗೆ ಹೊಟ್ಟೆ ಉರಿ ತಡೆಯಲಾಗಲಿಲ್ಲ. ದೊಡ್ಡ ರಾಜ್ಯ ಆಗಿರುವುದರಿಂದ ಪ್ರಧಾನಮಂತ್ರಿಯವರು ಉದ್ದೇಶಪೂರ್ವಕವಾಗಿಯೇ ಗುರಿ ಮಾಡುತ್ತಿದ್ದಾರೆ. ನನ್ನ ಮೇಲೂ ಕೂಡ ಹಗೆತನ ಸಾಧಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ನಾಯಕರ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿವೆ. ಕೋವಿಡ್ ಸಂದರ್ಭದಲ್ಲಿ ಔಷಧಿಗಳ ಖರೀದಿ, ಪಿಪಿಇ ಕಿಟ್ ಖರೀದಿಯಲ್ಲಿ ಕೋಟ್ಯಂತರ ರೂ. ಹಗರಣವಾಗಿದೆ. ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರ ವರದಿಯ ಪ್ರಕಾರ 2147 ಕೋಟಿ ರೂ. ಖರ್ಚು ಮಾಡಿ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ. ಲೆಕ್ಕ ಸಿಗುತ್ತಿರುವುದು 330 ಕೋಟಿ ರೂ. ಮಾತ್ರ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದರ ಬಗ್ಗೆ ಏಕೆ ಲೆಕ್ಕ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಅಬಕಾರಿ ಇಲಾಖೆಯಲ್ಲಿ 700 ಕೋಟಿ ರೂ. ಹಗರಣ ಮಾಡಿದ್ದಾರೆ ಎಂದು ಪ್ರಧಾನಿ ಸುಳ್ಳು ಹೇಳಿದ್ದಾರೆ. ಅವರು ಅದನ್ನು ಸಾಬೀತುಪಡಿಸಲಿ. ಇಲ್ಲವಾದರೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.
ಸಚಿವ ಬಿ.ನಾಗೇಂದ್ರ ಮರಳಿ ತಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಉಪಚುನಾವಣೆ ಮುಗಿಯಲಿ, ನಂತರ ಪರಿಶೀಲಿಸುವುದಾಗಿ ಹೇಳಿದ್ದೇನೆ. ಸದ್ಯಕ್ಕೆ ಸಂಪುಟ ಪುನರ್ ರಚನೆಯ ಉದ್ದೇಶವಿಲ್ಲ ಎಂದರು.ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.