ಮೈಸೂರು,ನ.13- ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರವನ್ನು ಮರು ಆರಂಭಿಸುವ ಪ್ರಸ್ತಾಪವಾಗಲೀ, ಚರ್ಚೆಯಾಗಲೀ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದಾಗಿ ಕೇರಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರೆ ಅದರ ಬಗ್ಗೆ ಅವರ ಬಳಿಯೇ ಸ್ಪಷ್ಟನೆ ಕೇಳಿ. ನನಗಿರುವ ಮಾಹಿತಿ ಪ್ರಕಾರ, ಸರ್ಕಾರದ ಮುಂದೆ ಇಂತಹ ಯಾವುದೇ ಚರ್ಚೆಗಳು ಇಲ್ಲ ಎಂದು ಹೇಳಿದರು.
ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ತಾನು ಮಾಡಲಿ. ಈ ಹಂತದಲ್ಲಿ ತಾವು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ. ಜಾರಿ ನಿರ್ದೇಶನಾಲಯ ಈವರೆಗೂ ತಮ ಪತ್ನಿಯವರಿಗೆ ಯಾವುದೇ ನೋಟೀಸ್ ನೀಡಿಲ್ಲ. ಜಾರಿ ನಿರ್ದೇಶನಾಲಯ ಮುಡಾ ಪ್ರಕರಣದಲ್ಲಿ ಸುಳ್ಳು ಪ್ರಕರಣಗಳನ್ನು ತನಿಖೆ ಮಾಡುತ್ತಿದೆ ಎಂದಷ್ಟೇ ತಿಳಿಸುವುದಾಗಿ ಹೇಳಿದರು.
ಜಮೀರ್ ಅಹಮದ್ ಖಾನ್ ಮತ್ತು ಕುಮಾರಸ್ವಾಮಿ ಒಂದು ಕಾಲದಲ್ಲಿ ಆತೀಯ ಸ್ನೇಹಿತರಾಗಿದ್ದರು. ಅವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಜಮೀರ್ ಅವರ ಹೇಳಿಕೆಯನ್ನು ವೈಭವೀಕರಿಸುವವರು, ದೇವೇಗೌಡರು ಸಿದ್ದರಾಮಯ್ಯ ಅವರ ಸೊಕ್ಕು ಮುರಿಯುತ್ತೇನೆ ಎಂದು ಹೇಳಿರುವುದಕ್ಕೆ ಏಕೆ ಪ್ರತಿಕ್ರಿಯೆ ನೀಡುವುದಿಲ್ಲ? ಈ ರೀತಿ ಹೇಳುವುದು ಸರಿಯೇ? ಎಂದು ಪ್ರಶ್ನಿಸಿದರು.
ಮುಂದಿನ ಚುನಾವಣೆಯೂ ಸಿದ್ದರಾಮಯ್ಯನವರ ನೇತೃತ್ವದಲ್ಲೇ ನಡೆಯಲಿ ಎಂದು ಶಾಸಕ ಚಿಕ್ಕಮಾಧು ನೀಡಿರುವ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಅಲ್ಪಸಂಖ್ಯಾತರಿಗೂ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆ ಇದೆ. ಆದರೆ ನಿರ್ಧಾರ ತೆಗೆದುಕೊಂಡಿಲ್ಲ. ಬಿಜೆಪಿಯವರಿಗೆ ಕೋಮುಗಳ ನಡುವೆ ಬೆಂಕಿ ಹಚ್ಚುವುದೇ ಕೆಲಸ. ಸಮಾಜದಲ್ಲಿ ಶಾಂತಿ ಸೋದರತ್ವ ಮೂಡಿಸಬೇಕು ಎಂದು ಅವರು ಎಂದೂ ಬಯಸಿಲ್ಲ ಎಂದರು.