ಬೆಂಗಳೂರು,ನ.13- ಪ್ಲಾಸ್ಟಿಕ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಅಕ್ಕಪಕ್ಕದ ಗೋದಾಮಿಗಳಿಗೂ ತಾಗಿ ಹೊತ್ತಿ ಉರಿದಿರುವ ಘಟನೆ ಇಂದು ಬೆಳಗಿನ ಜಾವ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಾಯಂಡಹಳ್ಳಿ ಸಮೀಪದ ಮುಕ್ತಚಾರಿ ಲೇಔಟ್ನಲ್ಲಿ ಕೈಗಾರಿಕಾ ಪ್ರದೇಶವಿದ್ದು, ಈ ಸ್ಥಳದಲ್ಲಿ ಪ್ಲಾಸ್ಟಿಕ್, ರಬ್ಬರ್ ಹಾಗೂ ಚೀಲದ ಗೋದಾಮುಗಳಿವೆ. ಇಂದು ಬೆಳಗಿನ ಜಾವ 2.15ರಲ್ಲಿ ಮೊದಲು ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಈ ಗೋದಾಮಿನ ಬೆಂಕಿಯ ಕಿಡಿ ಪಕ್ಕದ ರಬ್ಬರ್ ಗೋದಾಮಿಗೆ ತಾಗಿದ್ದಲ್ಲದೆ ಇದರ ಪಕ್ಕದಲ್ಲಿದ್ದ ಚೀಲದ ಗೋದಾಮಿಗೂ ತಾಗಿ ಹೊತ್ತುಕೊಂಡಿವೆ. ಈ ಮೂರು ಗೋದಾಮುಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿ ಬೆಂಕಿ ನಂದಿಸಲು ಬೆಳಗ್ಗೆ 9 ಗಂಟೆಯವರೆಗೂ ಹರಸಾಹಸಪಟ್ಟು ಸತತ ಶ್ರಮವಹಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಬೆಳಗಿನ ಜಾವವಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮೂರು ಗೋದಾಮುಗಳಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದು, ನಷ್ಟದ ಅಂದಾಜು ಸದ್ಯಕ್ಕೆ ತಿಳಿದುಬಂದಿಲ್ಲ.
ಈ ಬಗ್ಗೆ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಅವಘಡಕ್ಕೆ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮೊದಲು ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.