ಒಟ್ಟಾವಾ,ನ.22- ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮೊದಲೇ ತಿಳಿದಿತ್ತು ಎಂದು ನಾವು ಹೇಳಿಲ್ಲ ಎಂದು ಹೇಳುವ ಮೂಲಕ ಮಾಧ್ಯಮ ವರದಿಯನ್ನು ಕೆನಡಾ ಸರ್ಕಾರ ಅಧಿಕೃತವಾಗಿ ತಿರಸ್ಕರಿಸಿದೆ. ಈ ಹತ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರವನ್ನು ಎತ್ತಿ ಹಿಡಿದ ಕೆನಡಾದ ಮಾಧ್ಯಮಗಳ ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಳ್ಳಿಹಾಕಿದ ಒಂದು ದಿನದ ನಂತರ, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಪಾತ್ರವನ್ನು ಕೆನಡಾ ನಿರಾಕರಿಸಿದೆ.
ಇತ್ತೀಚೆಗೆ ಪ್ರಕಟಗೊಂಡ ವಿವಾದಾತ್ಮಕ ಮಾಧ್ಯಮ ವರದಿಯ ಬಗ್ಗೆ ಕೆನಡಾದ ಅಧ್ಯಕ್ಷ ಜಸ್ಟಿನ್ ಟ್ರುಡೊ ಸರ್ಕಾರ ಸ್ಪಷ್ಟೀಕರಣವನ್ನು ನೀಡಿದ್ದು, ಈ ವರದಿಯಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೈವಾಡ ಇರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಇದೀಗ ಈ ಮಾಧ್ಯಮ ವರದಿಯನ್ನು ಊಹಾಪೋಹ ಮತ್ತು ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ ಎಂದು ಟ್ರುಡೋ ಸರ್ಕಾರ ಹೇಳಿದೆ.
ಅಕ್ಟೋಬರ್ 14 ರಂದು ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯ ಕಾರಣ ಕೆನಡಾ ಪೊಲೀಸ್ ಮತ್ತು ಅಧಿಕಾರಿಗಳು ಕೆನಡಾದಲ್ಲಿ ಭಾರತ ಸರ್ಕಾರದ ಏಜೆಂಟರು ನಡೆಸಿದ ಗಂಭೀರ ಅಪರಾಧ ಚಟುವಟಿಕೆಯ ಬಗ್ಗೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುವ ಕ್ರಮವನ್ನು ತೆಗೆದುಕೊಂಡರು. ಆದರೆ ಕೆನಡಾ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.
ಕೆನಡಾದೊಳಗಿನ ಗಂಭೀರ ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆ ಇಲ್ಲ. ಮಾಧ್ಯಮ ವರದಿ ಕೇವಲ ಊಹೆ ಮತ್ತು ನಿಖರವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ಮೇಲೆ ಆಗಾಗ ಸುಳ್ಳು ಆರೋಪ ಹೊರಿಸುತ್ತಲೇ ಬಂದಿರುವ ಜಸ್ಟಿನ್ ಟ್ರೂಡೊ ಸರ್ಕಾರಕ್ಕೆ ಇದೀಗ ಮತ್ತೊಮೆ ಮುಜುಗರವಾಗಿದ್ದು, ಭಾರತ ಈ ಬಗ್ಗೆ ಕಟ್ಟುನಿಟ್ಟಿನ ಪ್ರತಿಕ್ರಿಯೆ ನೀಡಿದ ನಂತರ ಟ್ರೂಡೊ ಸರ್ಕಾರವು ಈ ಹೇಳಿಕೆಯನ್ನು ನೀಡಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಸೇರಿದಂತೆ ಕೆನಡಾದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾರತದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಅಜಿತ್ ದೋವಲ್ ಪಾತ್ರವಿಲ್ಲ ಎಂದು ಟ್ರೂಡೊ ಸರ್ಕಾರ ಹೇಳಿದೆ.
ಕೆನಡಾದ ಮಾಧ್ಯಮ ವರದಿಗೆ ಸ್ಪಷ್ಟನೆ ನೀಡಿರುವ ಜಸ್ಟಿನ್ ಟ್ರಡೊ, ಕೆನಡಾ ಸರ್ಕಾರವು ಈ ಹೇಳಿಕೆಯನ್ನು ನೀಡಿಲ್ಲ, ಅಥವಾ ಕೆನಡಾದಲ್ಲಿ ನಡೆಯುವ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ವರದಿ ಕೇವಲ ಊಹಾಪೋಹವನ್ನು ಆಧರಿಸಿದ್ದಾಗಿದೆ ಎಂದು ಹೇಳಿದೆ.
ವರದಿಯಲ್ಲಿ ಏನಿತ್ತು? :
ಕೆನಡಾದ ಗ್ಲೋಬ್ ಆಂಡ್ ಮೇಲ್ ಪತ್ರಿಕೆಯ ಅನಾಮಧೇಯ ಕೆನಡಾ ಸರ್ಕಾರಿ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನ ಹತ್ಯೆ ಸಂಚನ್ನು ಗೃಹ ಸಚಿವ ಅಮಿತ್ ಶಾ ರೂಪಿಸಿದ್ದರು. ಈ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಮಾಹಿತಿ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲಖಿಸಲಾಗಿತ್ತು.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಾವು ಸಾಮಾನ್ಯವಾಗಿ ಮಾಧ್ಯಮ ವರದಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹೀಗಿದ್ದರೂ ಕೆನಡಾ ಸರ್ಕಾರದ ಮೂಲವನ್ನು ಆಧಾರಿಸಿ ಪತ್ರಿಕೆಗೆ ನೀಡಿದ ಇಂತಹ ಹಾಸ್ಯಾಸ್ಪದ ಹೇಳಿಕೆಗಳನ್ನು ಅರ್ಹವಾದ ಖಂಡನೆಗಳೊಂದಿಗೆ ತಿರಸ್ಕರಿಸಬೇಕು. ಈ ರೀತಿಯ ಸುಳ್ಳು ಆರೋಪಗಳು ಈಗಾಗಲೇ ಹದಗೆಟ್ಟಿರುವ ನಮ ಸಂಬಂಧಗಳನ್ನು ಇನ್ನಷ್ಟು ಹಾಳು ಮಾಡುತ್ತವೆ ಎಂದು ಖಡಕ್ ಆಗಿಯೇ ಹೇಳಿದ್ದರು.
ಈ ಆರೋಪದ ನಂತರ ನಿಜ್ಜರ್‌ನ ಹತ್ಯೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಗದ್ದಲಕ್ಕೆ ಕಾರಣವಾಯಿತು. ಜಸ್ಟಿನ್ ಟ್ರುಡೊ ಅವರೇ ಈ ಘಟನೆಯಲ್ಲಿ ಭಾರತೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಭಾರತ ಸರ್ಕಾರ ಈ ಆರೋಪವನ್ನು ಖಂಡಾತುಂಡವಾಗಿ ನಿರಾಕರಿಸಿತ್ತು.