ಬೆಂಗಳೂರು,ನ.14- ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಮುಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ವಿಚಾರಣೆಗೆ ಕೂಡಲೇ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರಿಗೆ ಸಮನ್ಸ್ ಜಾರಿ ಮಾಡಲು ಮುಂದಾಗಿದೆ.
ಸಿದ್ದರಾಮಯ್ಯ , ಪತ್ನಿ ಪಾರ್ವತಿ ಹಾಗೂ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಪ್ರಕರಣ ಎಲ್ಲಾ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಯಾವುದೇ ಕ್ಷಣದಲ್ಲಿ ಸಮನ್ಸ್ ಜಾರಿ ಮಾಡುವ ಸಂಭವವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ಮಾಜಿ ಆಯುಕ್ತ ನಟೇಶ್ ಮತ್ತು ದಿನೇಶ್ಕುಮಾರ್ ಅವರಿಗೂ ಇಡಿ ನೋಟಿಸ್ ನೀಡಿದೆ. ಒಂದೊಮೆ ಇವರನ್ನು ತನಿಖೆಗೊಳಪಡಿಸಿದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ ಸಮನ್ಸ್ ಜಾರಿಯಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ನಟೇಶ್ ಮತ್ತು ದಿನೇಶ್ ಕುಮಾರ್ ಅವರ ನಿವಾಸಗಳ ಮೇಲೆ ಇತ್ತೀಚಿಗೆ ಇ.ಡಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ನಟೇಶ್ ಅವರ ನಿವಾಸದಿಂದ ನಾಲ್ಕು ಬ್ಯಾಗ್ ಗಳಲ್ಲಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ನಂತರ ಅವರ ಸ್ವಂತ ಕಾರಿನಲ್ಲಿ ಇಡಿ ಕಚೇರಿಗೆ ಕರೆದೊಯ್ಯಲಾಗಿತ್ತು. ನಟೇಶ್ ಮತ್ತು ದಿನೇಶ್ ಕುಮಾರ್ ಅವರು ಸುಳ್ಳು ದಾಖಲೆ ಸೃಷ್ಟಿಸಿ ನೂರಾರು ಕೋಟಿ ಮೌಲ್ಯದ ಮುಡಾ ನಿವೇಶನಗಳನ್ನು ಕೆಲವರಿಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂಬ ಆರೋಪವಿದೆ.
ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದೂರುದಾರರಿಗೆ ನೋಟಿಸ್ ನೀಡಿ ಮಾಹಿತಿ ಕಲೆಹಾಕುವುದರ ಜೊತೆಗೆ ಅಧಿಕಾರಿಗಳ ಜನಜಾಲಾಡುತ್ತಿದ್ದಾರೆ. ಮುಡಾದಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ದಾಳಿ ಮಾಡಿ ದಾಖಲೆ ಪರಿಶೀಲನೆಗೆ ಮುಂದಾಗಿದೆ. ಇದರಿಂದ ಮುಡಾ ಹಗರಣ ಪ್ರಕರಣದ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಸಹ ಯಾವ ಸಂದರ್ಭದಲ್ಲಿ ಇ.ಡಿ ದಾಳಿ ನಡೆಯಲಿದೆಯೋ ಎನ್ನುವ ಆತಂಕ ಶುರುವಾಗಿದೆ.
ಅಕ್ಟೋಬರ್ 29ರಂದು ಇಡಿ ಮೈಸೂರು ಮೂಲದ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಂದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿತ್ತು. ಸಿದ್ದರಾಮಯ್ಯ ಅವರು ಮುಡಾ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರ ಮುಂದೆ ಹಾಜರಾಗಿ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.
ಸಿಬಿಐ ತನಿಖೆಗೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 26ರಂದು ಕೈಗೆತ್ತಿಕೊಳ್ಳಲಿದ್ದು, ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆಗೆ ನ್ಯಾಯಾಲಯ ಸೂಚಿಸಿದೆ. ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ತನಿಖೆ ಎದುರಿಸಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ.
ತಮ ಪತ್ನಿಗೆ ಮುಡಾದಿಂದ ಅಕ್ರಮವಾಗಿ 14 ನಿವೇಶನ ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿದ್ದಾರೆ. ಈ ಸಂಬಂಧ ಸದ್ಯ ಲೋಕಾಯುಕ್ತ ಹಾಗೂ ಇಡಿ ತನಿಖೆ ನಡೆಸುತ್ತಿದೆ. ಸಿಎಂ ಪತ್ನಿ ಮುಡಾಕ್ಕೆ ಮಂಜೂರು ಮಾಡಿದ ನಿವೇಶನಗಳನ್ನು ವಾಪಸ್ ನೀಡಿದ್ದಾರೆ.
ಮತ್ತೊಮೆ ವಿಚಾರಣೆ ?:
ಮೈಸೂರು ಲೋಕಾಯುಕ್ತ ಎಸ್ಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲಾ ಆರೋಪಿಗಳಿಗೂ ಮತ್ತೊಮೆ ವಿಚಾರಣೆ ನಡೆಸಲು ನಿರ್ಧಾರಿಸಿದ್ದಾರೆ. 50:50 ನಿವೇಶನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಮತ್ತಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಶೀಘ್ರ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಎ4 ಆರೋಪಿ ದೇವರಾಜು, ಎ3 ಆರೋಪಿ ಮಲ್ಲಿಕಾರ್ಜುನಸ್ವಾಮಿ, ಎ2 ಆರೋಪಿ ಸಿಎಂ ಪತ್ನಿ ಬಿ.ಎನ್.ಪಾರ್ವತಿ, ಎ1 ಆರೋಪಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳ ಸಾಮ್ಯತೆ ಪರಿಶೀಲನಾ ಕಾರ್ಯ ನಡೆಯುತ್ತಿದೆ. ದಾಖಲೆಗಳ ಹೊಂದಾಣಿಕೆ ಸರಿ ಇದೆಯೇ ಎಂದು ಪರಿಶೀಲನೆ ಮಾಡಲಾಗುತ್ತದೆ.
ಈಗಾಗಲೇ ನಾಲ್ವರ ವಿಚಾರಣೆ ನಡೆಸಿರುವ ಲೋಕಾಯುಕ್ತ ಎಸ್ಪಿ ಉದೇಶ್, ಅಗತ್ಯಬಿದ್ದರೆ ಮತ್ತೊಮೆ ಕರೆಸಿಕೊಳ್ಳಲು ಲೋಕಾಯುಕ್ತ ಅಧಿಕಾರಿಗಳ ಚಿಂತನೆ ಬಿಟ್ಟಿದ್ದು ಎಂದು ಹೇಳಿದ್ದರು. ಇದೀಗ ಹೇಳಿಕೆಗಳು, ದಾಖಲೆಗಳ ಹೊಂದಾಣಿಕೆಯಿಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇನ್ನುಳಿದ ಆರೋಪಿಗಳು ಮತ್ತೊಮೆ ವಿಚಾರಣೆ ಎದುರಾಗಬೇಕಾದ ಅನಿವಾರ್ಯತೆ ಇದೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ.
ಏನಿದು ಪ್ರಕರಣ?:
ಮುಡಾ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ದೇವನೂರು ಬಡಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಹೆಸರಿನ ಜಮೀನನ್ನು ಅನುಮತಿ ಪಡೆಯದೇ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಮುಡಾ ವತಿಯಿಂದ 14 ಸೈಟ್ಗಳನ್ನು ಪಡೆದಿದ್ದರು. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಈ ಸೈಟುಗಳನ್ನು ಪಡೆದಿದ್ದರು. ಅಸಲಿಗೆ ದೇವನೂರು ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ನಡೆದಾಗ ಸಿದ್ದರಾಮಯ್ಯನವರ ಪತ್ನಿ ಹೆಸರಿನಲ್ಲಿ ಜಮೀನೇ ಇರಲಿಲ್ಲ, ಅವರು ಮುಡಾಕ್ಕೆ ತಪ್ಪು ಮಾಹಿತಿ ಕೊಟ್ಟು 14 ಸೈಟ್ಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.