Friday, November 15, 2024
Homeರಾಜ್ಯನ.23ರಂದು ಪ್ರಾಸಿಕ್ಯೂಷನ್‌ ಪ್ರಶ್ನಿಸಿದ್ದ ಸಿಎಂ ಮೇಲ್ಮನವಿ ವಿಚಾರಣೆ

ನ.23ರಂದು ಪ್ರಾಸಿಕ್ಯೂಷನ್‌ ಪ್ರಶ್ನಿಸಿದ್ದ ಸಿಎಂ ಮೇಲ್ಮನವಿ ವಿಚಾರಣೆ

Karnataka High Court to hear CM Siddaramaiah's appeal against MUDA Scam prosecution on Nov 23

ಬೆಂಗಳೂರು,ನ.14- ಮುಡಾ ಪ್ರಕರಣದಲ್ಲಿ ತಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲನವಿ ಅರ್ಜಿ ವಿಚಾರಣೆ ಇದೇ 23ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ಕೆ.ವಿ.ಅರವಿಂದ್‌ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ 23ರಂದು ಅರ್ಜಿ ವಿಚಾರಣೆ ನಡೆಸಲಿದ್ದಾರೆ.ಗುರುವಾರ ಹೈಕೋರ್ಟ್‌ನ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿದ್ದ ಪೀಠಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಡಾ.ಅಭಿಷೇಕ್‌ ಮನು ಸಿಂಘ್ವಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲನವಿ ಸಲ್ಲಿಸಲಾಗಿದೆ. ಈವರೆಗೂ ವಿಚಾರಣೆಗೆ ನಿಗದಿಯಾಗಿಲ್ಲ.

ಅಲ್ಲದೆ, ಮೇಲನವಿ ವಿಚಾರಣೆ ತುರ್ತಾಗಿದ್ದು, ಶೀಘ್ರದಲ್ಲಿ ವಿಚಾರಣೆಗೆ ನಿಗದಿ ಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ ಇದೇ 23ಕ್ಕೆ ವಿಚಾರಣೆಗೆ ನಿಗದಿಪಡಿಸಿತು. ಸಿಎಂ ಸಿದ್ದರಾಮಯ್ಯನವರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರಿಗೆ ಮೇಲನವಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮಾಡಿಕೊಂಡ ಮನವಿಯನ್ನು ಪೀಠ ಪುರಸ್ಕರಿಸಿತು.

ಕಳೆದ ಸೆಪ್ಟೆಂಬರ್‌ 24ರಂದು ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎನ್‌.ನಾಗಪ್ರಸನ್ನ ನೇತೃತ್ವದ ಪೀಠ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ರವರು ಅಭಿಯೋಜನೆಗೆ ನೀಡಿದ್ದ ಕ್ರಮವನ್ನು ಎತ್ತಿಹಿಡಿದು ಸಿಎಂ ಅರ್ಜಿಯನ್ನು ವಜಾಗೊಳಿಸಿದ್ದರು.

ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯನವರ ಪರ ವಕೀಲ ಶತಾಭಿಷ್‌ ಶಿವಣ್ಣ ಅವರು ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ಮುಡಾ ಹಗರಣ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪಿಸಿ ಆಯಕ್ಟ್‌) ಸೆಕ್ಷನ್‌ 17ಎ ಅಡಿಯಲ್ಲಿ ಪೊಲೀಸ್‌‍ ತನಿಖೆ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಬಿಎನ್‌ಎಸ್‍ಎಸ್‌‍) ಸೆಕ್ಷನ್‌ 2023ರ ಸೆಕ್ಷನ್‌ 218 ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ 2024ರ ಆ.16ರಂದು ರಾಜ್ಯಪಾಲರು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ರಾಜ್ಯ ಸಚಿವ ಸಂಪುಟದ ಸದಸ್ಯರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಅದನ್ನು ಪರಿಗಣಿಸದೆ ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರೇ ಆತುರದ ಅನುಮತಿ ನೀಡಿದ್ದಾರೆ. ಅಂತಹ ಆದೇಶ ಹೊರಡಿಸಲು ಸಮಂಜಸವಾದ ಕಾರಣಗಳನ್ನೂ ನೀಡಿಲ್ಲ ಮತ್ತು ಸೂಕ್ತವಾಗಿ ವಿವೇಚನೆಯನ್ನೂ ಬಳಸಿಲ್ಲ ಎಂದು ಮೇಲನವಿಯಲ್ಲಿ ಆಕ್ಷೇಪಿಸಿದ್ದಾರೆ.

ಸಂಪುಟದ ಸಚಿವರ ಸಲಹೆ ಮತ್ತು ಸೂಚನೆ ಆಧಾರದಲ್ಲಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು ಎಂದು ಸಂವಿಧಾನದ ಪರಿಚ್ಛೇದ 163 ಸ್ಪಷ್ಟವಾಗಿ ಹೇಳುತ್ತದೆ. ಆ ಪರಿಚ್ಛೇದವೂ ಸೇರಿದಂತೆ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ರಾಜ್ಯಪಾಲರು ಅನುಮತಿ ನೀಡಿದ್ದರು. ಹಾಗಾಗಿ, ರಾಜ್ಯಪಾಲರ ಪೂರ್ವಾನುಮತಿಯೇ ನಿರಂಕುಶ, ಅಸಾಂವಿಧಾನಿಕ ಮತ್ತು ಅಕ್ರಮವಾಗಿದೆ. ಅಂತಹ ಆದೇಶವನ್ನು ಪುರಸ್ಕರಿಸಿರುವ ಏಕಸದಸ್ಯ ಪೀಠದ ತೀರ್ಪು ಸಹ ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಮೇಲನವಿಯಲ್ಲಿ ಮುಖ್ಯಮಂತ್ರಿ ಆಕ್ಷೇಪಿಸಿದ್ದಾರೆ.

ಅಪ್ರಸ್ತುತ ಸತ್ಯಗಳನ್ನು ಆಧರಿಸಿ ಏಕಸದಸ್ಯ ಪೀಠವು ತೀರ್ಪು ನೀಡಿದೆ. ರಾಜ್ಯಪಾಲರು ಸಂಪುಟದ ಸಚಿವರ ಸಲಹೆ-ಸೂಚನೆ ಕಡೆಗಣಿಸಿ ಹಾಗೂ ವಿವೇಚನೆ ಬಳಸದೆ ಆದೇಶ ಹೊರಡಿಸಿರುವುದು ಮತ್ತು ಪಿಸಿ ಕಾಯ್ದೆ ಸೆಕ್ಷನ್‌ 17ಎ ಮತ್ತು ಬಿಎನ್‌ಎಸ್‌‍ಎಸ್‌‍ ಸೆಕ್ಷನ್‌ 218ರ ಕುರಿತ ವ್ಯಾಖ್ಯಾನಗಳು ಸೇರಿದಂತೆ ಅನೇಕ ಪ್ರಮುಖ ಕಾನೂನಾತಕ ಅಂಶಗಳನ್ನು ಪರಿಗಣಿಸುವಲ್ಲಿ ಏಕಸದಸ್ಯ ಪೀಠ ನಿರ್ಲಕ್ಷಿಸಿದೆ ಹಾಗೂ ವಿಫಲವಾಗಿದೆ.

ಆ ಮೂಲಕ ಏಕಸದಸ್ಯ ಪೀಠವು ಸಹ ದೋಷಪೂರಿತ ಹಾಗೂ ವಿವೇಚನಾ ರಹಿತವಾದಂತಹ ತೀರ್ಪು ನೀಡಿದೆ. ಆದ್ದರಿಂದ ಏಕಸದಸ್ಯ ಪೀಠದ ಆದೇಶವೂ ನಿರಂಕುಶ, ಸ್ವೇಚ್ಛಾನುಸಾರ ಮತ್ತು ಕಾನೂನುಬಾಹಿರವಾಗಿದೆ. ಆದ್ದರಿಂದ ಆ ತೀರ್ಪು ಮತ್ತು ರಾಜ್ಯಪಾಲರ ಆದೇಶವನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಮೇಲನವಿಯಲ್ಲಿ ಕೋರಿದ್ದಾರೆ.

ಪ್ರಕರಣವೇನು?:
ಮುಡಾ ಪ್ರಕರಣ ಕುರಿತು ಮುಖ್ಯಮಂತ್ರಿ ವಿರುದ್ಧ ಪೊಲೀಸ್‌‍ ತನಿಖೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಂದೇ ರಾಜ್ಯಪಾಲರ ಆದೇಶ ಆಧರಿಸಿ ಮುಖ್ಯಮಂತ್ರಿ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಹೈಕೋರ್ಟ್‌ ಏಕಸದಸ್ಯ ಪೀಠ ಮಧ್ಯಂತರ ಆದೇಶ ಮಾಡಿತ್ತು. ಸೆ.12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಸೆ.24ರಂದು ಮುಖ್ಯಮಂತ್ರಿಗಳ ಅರ್ಜಿ ವಜಾಗೊಳಿಸಿ, ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸ್‌‍ ತನಿಖೆ ನಡೆಸಲು ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು.

RELATED ARTICLES

Latest News