ಬೆಂಗಳೂರು,ನ.14- ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ನಡೆಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ಮುಂದಾಗಿದ್ದಾರೆ.ಮೂರು ತಿಂಗಳಿನಿಂದ ನಮಗೆ ಸಂಬಳ ಸಿಕ್ಕಿಲ್ಲ. ಹೀಗಾಗಿ ನ.16ರ ರಾತ್ರಿ 8 ಗಂಟೆಯ ಒಳಗಡೆ ವೇತನ ಬಿಡುಗಡೆ ಮಾಡಬೇಕು.
ಸಂಬಳ ಬಿಡುಗಡೆ ಮಾಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘ, ಅಖಿಲ ಕರ್ನಾಟಕ 108 ಆಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್ ನೌಕರರರ ಸಂಘ ಎಚ್ಚರಿಕೆ ನೀಡಿವೆ. ಆರೋಗ್ಯ ಕವಚ ಯೋಜನೆಯಲ್ಲಿ ಎರಡು ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ.
ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯ ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್್ಸ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕಾರಣಕ್ಕೆ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಗಳು ತಿಳಿಸಿವೆ.
ನ.16 ಸಂಬಳವಾಗದೇ ಇದ್ದರೆ ರಾತ್ರಿಯಿಂದಲೇ ಕೆಲಸ ಸ್ಥಗಿತಗೊಳಿಸಲಾಗುವುದು ಅಷ್ಟೇ ಅಲ್ಲದೇ ನಾಯ್ಯಾಲಯದ ಆದೇಶದ ಅನ್ವಯ ಪ್ರತಿ ತಿಂಗಳ 7ನೇ ತಾರೀಖಿನಂದು ವೇತನ ಪಾವತಿಯಾಗಬೇಕು. ವಿಳಂಬವಾದರೆ 7ರ ರಾತ್ರಿಯಿಂದಲೇ ಅಂಬುಲೆನ್ಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅವು ಎಚ್ಚರಿಕೆ ನೀಡಿವೆ.