ಮೈಸೂರು,ನ.15- ವಸತಿ ಸಚಿವ ಜಮೀರ್ ಅಹಮದ್ ಖಾನ್ರವರನ್ನು ನಾನು ಯಾವತ್ತೂ ಕುಳ್ಳ ಎಂದು ಕರೆದಿಲ್ಲ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಮೀರ್ ಅವರು ನನ್ನನ್ನು ಕರಿಯ ಎಂದು ಸಂಬೋಧಿಸಿಲ್ಲ. ನಮಿಬ್ಬರ ನಡುವೆ ರಾಜಕೀಯವಾಗಿ ಆತೀಯತೆ ಇತ್ತೇ ಹೊರತು ಈ ಹೇಳಿಕೆಗಲ್ಲ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಒಮೆ ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಅವರು ನನ್ನನ್ನು ಕುಮಾರ ಎಂದು ಕರೆದಾಗ ಒಹೊಡೆಯಲು ಹೋಗಿದ್ದರು. ಈ ರೀತಿಯ ಪದಬಳಕೆ ಎಂದಿಗೂ ನನ್ನಿಂದಲೂ ಆಗಿಲ್ಲ, ಅವರಿಂದಲೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ದುಡ್ಡಿನ ಮದದಿಂದ ಕೊಂಡುಕೊಳ್ಳುತ್ತೇನೆ ಎಂಬ ರೀತಿ ಮಾತನಾಡಿದ್ದಾರೆ. ಇವರು ಎಲ್ಲಿದ್ದರು, ಯಾವ ಸಂದರ್ಭದಲ್ಲಿ, ಯಾರ ಕಾಲು ಹಿಡಿದಿದ್ದಾರೆ ಎಂಬುದು ಗೊತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಜಮೀರ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ, ಗೃಹಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಏನಾದರೂ ಇದೆಯೇ?, ನಾಗರಿಕ ಸಮಾಜವೆಂದು ಕರೆಯಬೇಕೇ? ಎಂದು ಟೀಕಾಪ್ರಹಾರ ನಡೆಸಿದ ಅವರು, ವರ್ಣಭೇದದ ಕುರಿತಂತೆ ಚರ್ಚೆ ಮಾಡುವುದು ಬೇಡ ಎಂದರು.
ಈ ರೀತಿಯ ಹೇಳಿಕೆ ನೀಡಿದ ಅವರ ವಿರುದ್ಧ ಎಂತೆಂಥ ಕೇಸು ದಾಖಲಿಸಿದ್ದಾರೆ. ಅಮಾಯಕರನ್ನು ಜೈಲಿಗೆ ಕಳುಹಿಸಿದ್ದಾರೆ. ಆದರೆ ಸಚಿವರ ಹೇಳಿಕೆಯನ್ನು ಈಗ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೊಕ್ಕು ಮುರಿಯುತ್ತೇನೆ ಎಂದು ಹೇಳಿರುವುದು ಅಸಾಂವಿಧಾನಿಕವಲ್ಲ. ಗರ್ವಭಂಗವೆಂದರೆ ತಪ್ಪೇ ಎಂದು ಪ್ರಶ್ನಿಸಿದರು.
ಎಸ್ಐಟಿ ರಚನೆ ಮಾಡಲಿ :
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ಎಸ್ಐಟಿ ರಚನೆ ಮಾಡಲಾಗುತ್ತಿದೆ. ಆಪರೇಷನ್ ಕಮಲಕ್ಕೆ 50 ಕೋಟಿ ಆಮಿಷ ಒಡ್ಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ನಿಖರವಾಗಿ ಹೇಳುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವವರೂ ಅವರೇ. ಇದಕ್ಕೂ ಒಂದು ಎಸ್ಐಟಿ ರಚನೆ ಮಾಡಿ ತನಿಖೆ ಮಾಡಿಸಲಿ.
ರಾಜ್ಯ ಮತ್ತು ದೇಶದ ಇತಿಹಾಸದಲ್ಲಿ ಇಷ್ಟೊಂದು ಎಸ್ಐಟಿ ರಚನೆಯಾಗಿರುವುದು ದಾಖಲೆಯಾಗಿದೆ. ಪ್ರತಿಯೊಂದು ವಿಚಾರಕ್ಕೂ ಎಸ್ಐಟಿ ರಚನೆ ಮಾಡುವುದಾಗಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರು ಆಪರೇಷನ್ ಕಮಲದ ಬಗ್ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಫಲಿತಾಂಶ ಪ್ರಕಟಗೊಂಡ ನಂತರ ಅದರ ಬಗ್ಗೆ ಚರ್ಚೆ ಮಾಡೋಣ. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ರಾಜಕೀಯ ವಿಶ್ಲೇಷಣೆ ಮಾಡಿ ಮಾತನಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.