ಬೆಂಗಳೂರು,ನ.15- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾ ವಣೆ ವೇಳೆ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ವಿವಾದಿತ ಹೇಳಿಕೆಯ ಹಿಂದೆ ರಾಜಕೀಯ ಲಾಭ, ನಷ್ಟಗಳ ಲೆಕ್ಕಾಚಾರಗಳು ಆರಂಭವಾಗಿವೆ.ಜಮೀರ್ ಅಹಮದ್ ಖಾನ್ ಕಾಂಗ್ರೆಸ್ಗೆ ಬಂದಾಗಿ ನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾ ವಣೆಗೂ ಮುನ್ನ ಸಿದ್ದ ರಾಮಯ್ಯ ಮತ್ತೆ
ಮುಖ್ಯಮಂತ್ರಿಯಾಗಬೇಕು ಎಂದು ಜಮೀರ್ ನೀಡಿದ್ದ ಹೇಳಿಕೆ ಕಾಂಗ್ರೆಸ್ ಪಾಲಿಗೆ ಬಿಸಿತುಪ್ಪವಾಗಿತ್ತು. ಪಕ್ಷದ ಎಲ್ಲಾ ನಾಯಕರೂ ಜಾತಿ ಸೇರಿದಂತೆ ನಾನಾ ರೀತಿಯ ಸಮೀಕರಣಗಳನ್ನು ಲೆಕ್ಕಾಚಾರ ಮಾಡಿ ಮತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರು.
ಒಂದೆಡೆ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿದ್ದರೆ, ಹಳೆ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಅಗೋಚರವಾದ ಸಂದೇಶಗಳು ರವಾನೆಯಾಗುತ್ತಿದ್ದವು.
ಬಹಿರಂಗವಾಗಿ ಯಾವುದೇ ಚರ್ಚೆಯಾಗದೇ ಒಳಗೊಳಗೇ ನಡೆಯುತ್ತಿದ್ದ ಈ ಲೆಕ್ಕಾಚಾರಗಳಿಗೆ ಘಾಸಿಯಾಗುವಂತೆ ಜಮೀರ್ ಅಹಮದ್ ಖಾನ್ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು.
ಹೈಕಮಾಂಡ್ ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಜಮೀರ್ ತಮನ್ನು ತಾವು ತಿದ್ದಿಕೊಳ್ಳಲಿಲ್ಲ. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ರವರು ಜಮೀರ್ ಅವರ ಆಪ್ತ ಅಖಂಡ ಶ್ರೀನಿವಾಸ್ಗೆ ಪುಲಿಕೇಶಿ ನಗರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡದೇ ತಕ್ಕ ಪಾಠ ಕಲಿಸಿದರು.
ಆ ವೇಳೆ ಒಂದಿಷ್ಟು ಕಾಲ ಮೌನವಾಗಿದ್ದ ಜಮೀರ್ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಮತ್ತೆ ವಿವಾದಿತ ವಿಚಾರಗಳಿಗೆ ಮುಂದಾದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಮತ್ತೆ ಗೊಂದಲ ಮೂಡಿಸಿದರು. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ.
ಈಗ ವಕ್‌್ಫ ವಿಚಾರವನ್ನು ಕೆಣಕಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿರುವುದರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.ಮಾತು ಮತ್ತು ನಡವಳಿಕೆಯ ಮೇಲೆ ಹಿಡಿತ ಇಲ್ಲದೆ ಏಕಾಏಕಿ ಅಪ್ರಚೋದಿತವಾಗಿ ವಿವಾದ ಸೃಷ್ಟಿಸುವ ಜಮೀರ್ ಅಹಮದ್ಖಾನ್ ಕಾಂಗ್ರೆಸ್ ಪಾಲಿಗೆ ಸಾಕಷ್ಟು ನಾಯಕರಿಗೆ ಒಲ್ಲದ ಕೂಸು. ಪಕ್ಷದಲ್ಲಿ ಜಮೀರ್ಗಿಂತಲೂ ಮುನ್ನ ನಜೀರ್ ಸಾಬ್, ಜಾಫರ್ ಶರೀಫ್, ರೆಹಮಾನ್ಖಾನ್, ರೋಶನ್ ಬೇಗ್, ಇಕ್ಬಾಲ್ ಅಹಮದ್ ಸರಡಗಿ, ಐ.ಜಿ.ಸನ್ನದಿ ಅವರಂತಹ ಘಟಾನಘಟಿ ನಾಯಕರಿದ್ದರು.
ಇವರಲ್ಲಿ ಬಹಳಷ್ಟು ಮಂದಿ ಅಲ್ಪಸಂಖ್ಯಾತ ಮುಖಂಡರು ವಲಸಿಗರಿಗೆ ಮಣೆ ಹಾಕುವ ಬದಲಾಗಿ ಮೂಲೆಗುಂಪಾಗಿ ಹೋದರು. ಅನಂತರ ಗುಂಪುಗಾರಿಕೆ ಹಾಗೂ ನಾಯಕರ ವೈಯಕ್ತಿಕ ಹಿತಾಸಕ್ತಿಗಳ ಕಾರಣಕ್ಕೆ ಪ್ರಭಾವಿ ಅಲ್ಪಸಂಖ್ಯಾತ ನಾಯಕರು ಮೂಲೆಗುಂಪಾಗಿ ಹೋದರು. ಎಲ್ಲರನ್ನೂ ಬದಿಗೆ ಸರಿಸಿ ಜಮೀರ್ ಅವರಿಗೆ ಕಾಂಗ್ರೆಸ್ನ ಪ್ರಭಾವಿತರು ಮಣೆ ಹಾಕುತ್ತಾ ಬಂದರು.
ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಪದೇಪದೇ ಸಂದೇಶ ಸಾರುವ ಪ್ರಯತ್ನ ನಡೆಸಿದರೂ ಒಳಗೊಳಗೆ ಕತ್ತಿ ಮಸೆಯುವಿಕೆ ಜೀವಂತವಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಇಂದಿರಾಗಾಂಧಿಯವರ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಇದರ ಬಗ್ಗೆ ನೇರವಾಗಿಯೇ ಛಾಟಿ ಬೀಸಿದ್ದರು. ಜಮೀರ್ ಮೇಲ್ನೋಟಕ್ಕೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರುವುದನ್ನು ಕಂಡು ಒಳಗೊಳಗೇ ಸಂದರ್ಭಾನುಸಾರ ತಮ ಎದುರಾಳಿಗಳಿಗೆ ಟಕ್ಕರ್ ನೀಡುವಂತಹ ತಂತ್ರಗಾರಿಕೆಯನ್ನು ಪಾಲಿಸುತ್ತಲೇ ಬಂದಿದ್ದಾರೆ.
ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಜಮೀರ್ ಮತ್ತೊಮೆ ತಮ ಒಳತಂತ್ರಗಾರಿಕೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರು ಜಮೀರ್ ಹೇಳಿಕೆಯಿಂದಾಗಿ ಒಂದು ಸಮುದಾಯದ ಮತಗಳು ಕ್ರೋಡೀಕರಣಗೊಂಡಿವೆ ಎಂದು ಹೇಳಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಚನ್ನಪಟ್ಟಣದ ಗೆಲುವಿನ ರಾಜಕೀಯ ಲಾಭ, ನಷ್ಟ ಲೆಕ್ಕಾಚಾರಗಳು ಸಾಕಷ್ಟಿವೆ. ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಚನ್ನಪಟ್ಟಣ ವಿಧಾನಸಭೆ ಚುನಾವಣೆ ಬುನಾದಿ ಎಂದು ಭಾವಿಸಲಾಗಿತ್ತು.
ಜಮೀರ್ ಹೇಳಿಕೆ ಗುರಿಸಾಧನೆಗಾಗಿ ಮತ್ತೊಬ್ಬರ ಮೇಲೆ ಬಂದೂಕು ಇಟ್ಟು ಗುಂಡು ಹೊಡೆದಂತಾಗಿದೆ ಎಂಬ ವ್ಯಾಖ್ಯಾನಗಳು ರಾಜಕೀಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ.ಇದೆಲ್ಲವನ್ನೂ ನೋಡಿದರೆ ಜಮೀರ್ ಮಾತನಾಡಿರುವುದು ಆವೇಶ ಅಥವಾ ಆಕಸಿಕ ಎಂದೆನಿಸುತ್ತಿಲ್ಲ.