ಬೆಂಗಳೂರು, ನ.25-ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಯಾವುದೇ ಗೊಂದಲ ಇಲ್ಲದೆ ಸುಸೂತ್ರವಾಗಿ ನಿನ್ನೆ ನಡೆಯಿತು.
ಕೆ-ಸೆಟ್ ಪರೀಕ್ಷೆಗೆ ಶೇ. 84ರಷ್ಟು ಹಾಗೂ ರಾಯಚೂರು ವಿವಿ ಪರೀಕ್ಷೆಗೆ ಶೇ. 64 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರರ್ಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ವಿಜಯಪುರ ಜಿಲ್ಲೆಗಳ ಒಟ್ಟು 252 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ರಾಯಚೂರು ವಿವಿ ಪರೀಕ್ಷೆ ಬೆಂಗಳೂರು ನಗರದಲ್ಲಿ ಮಾತ್ರ ನಡೆಯಿತು. ಈ ಪರೀಕ್ಷೆಯನ್ನು ವೆಬ್‌ಕಾಸ್ಟಿಂಗ್ ಮೂಲಕ ಕೆಇಎಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್‌ನಲ್ಲಿ ನಿಗಾವಹಿಸಲಾಯಿತು. ಯಾವುದೇ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಎಚ್ಚರವಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.