ಬೆಂಗಳೂರು,ನ.27- ನಗರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು 20ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಹಲವು ತಂಡಗಳಾಗಿ ಉದ್ಯಮಿಗಳ ಮನೆಬಾಗಿಲು ಬಡಿದ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆಗಳ ವಿರುದ್ಧ ಪರಿಶೀಲನೆ ನಡೆಸಿದರು.
ಬಿಲ್ಡರ್ಗಳು, ರಿಯಲ್ ಎಸ್ಟೇಟ್ ಉದ್ಯಮ ಸೇರಿದಂತೆ ಹಲವು ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ಮಾಲೀಕರಿಗೆ ಆದಾಯ ತೆರಿಗೆ ದಾಳಿ ಶಾಕ್ ನೀಡಿದೆ. ನಗರದ ವಯ್ಯಾಲಿ ಕಾವಲ್, ಕತ್ರಿಗುಪ್ಪೆ, ಬನಶಂಕರಿ ಸೇರಿದಂತೆ ಹಲವು ಕಡೆ ದಾಳಿಯಾಗಿರುವ ಮಾಹಿತಿ ಇದೆ. ಆದಾಯ ತೆರಿಗೆ ಅಧಿಕಾರಿಗಳು ಈವರೆಗೂ ಅಧಿಕೃತವಾದ ಹೇಳಿಕೆ ನೀಡಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ, ದಾಳಿ ಮತ್ತು ಶೋಧ ಕಾರ್ಯಾಚರಣೆ ಖಚಿತಗೊಂಡಿದೆ.
ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ರಾಜ್ಯದಲ್ಲಿನ ಮೂರು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ದಾಳಿ ಕೆಲ ಕಾಲ ನಿಂತಿತ್ತು. ಚುನಾವಣೆ ಮುಗಿದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಮತ್ತೆ ಅಖಡಕ್ಕಿಳಿದಿದ್ದಾರೆ.ತೆರಿಗೆ ಪಾವತಿಯನ್ನು ತಪ್ಪಿಸಿ ಅನಧಿಕೃತವಾಗಿ ಸಂಪನೂಲ ಕ್ರೂಢೀಕರಿಸುತ್ತಿರುವವರ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಅಧಿಕಾರಿಗಳು ಕೇಂದ್ರ ಮೀಸಲು ಪಡೆಗಳ ಭದ್ರತೆಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೂ ಆರಂಭಗೊಂಡಿರುವ ಶೋಧ ಕಾರ್ಯಾಚರಣೆ ಚುರುಕಿನಿಂದ ನಡೆದಿತ್ತು. ದಾಖಲಾತಿಗಳ ಪರಿಶೀಲನೆ, ಭೌತಿಕ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹದ ಮೂಲಕ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣದ ಬೆನ್ನು ಬಿದ್ದಿದ್ದರು. ಸಂಜೆಯ ವೇಳೆಗೆ ದಾಳಿಯ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದ್ದು, ಸದ್ಯದ ಮಾಹಿತಿ ಪ್ರಕಾರ, 20ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿಯಾಗಿರುವ ವರದಿಯಿದೆ.